ವಿಶೇಷ ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಜು. ೩೧: ಕೊಡಗಿನ ವಿವಿಧ ಭಾಗದಲ್ಲಿ ಕಾಡಾನೆಗಳ ಉಪಟಳ ಅಧಿಕಗೊಳ್ಳುತ್ತಿದ್ದು, ಹಲವೆಡೆ ಪ್ರಾಣಹಾನಿ ಸಂಭವಿಸಿದರೆ, ಇನ್ನೊಂದೆಡೆ ಹಿಂಡು ಹಿಂಡಾಗಿ ರೈತರ ಭತ್ತದ ಗದ್ದೆ, ಕಾಫಿ ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳ ಗುಂಪು ತೋಟದಲ್ಲಿರುವ ಕಾಫಿ, ಕರಿಮೆಣಸು, ಅಡಿಕೆ, ತೆಂಗು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಹಾನಿ ಮಾಡುತ್ತಿವೆ. ಅಲ್ಲದೆ ರೈತರ ಕೆರೆಗಳಲ್ಲಿ ಅಳವಡಿಸಿರುವ ಮೋಟಾರು ಹಾಗೂ ಪೈಪ್ಗಳನ್ನೂ ಕೂಡ ಧ್ವಂಸಗೊಳಿಸು ವುದು ನಡೆಯುತ್ತಲೇ ಬರುತ್ತಿದೆ.
ದ.ಕೊಡಗಿನ ಕುಂದ, ಈಚೂರು, ಹಳ್ಳಿಗಟ್ಟು ವಿ.ಬಾಡಗ, ಅರುವತ್ತೋಕ್ಲು, ಕೊಂಗಣ, ಕುಟ್ಟಂದಿ, ಹುದಿಕೇರಿ ಹೈಸೊಡ್ಲೂರು, ಬಿರುನಾಣಿ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ರೈತರು ಬೆಳೆಗಾರರು ಹಾಗೂ ನಾಗರಿಕರು ಸಂಜೆಯ ವೇಳೆಯಲ್ಲಿ ಮನೆಯಿಂದ ಹೊರ ಬರಲು ಆಲೋಚಿಸಬೇಕಾದ ಪರಿಸ್ಥಿತಿ ತಂದೊಡ್ಡಿದೆ. ಮುಂಜಾನೆಯ ವೇಳೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ರಸ್ತೆಯಲ್ಲಿ ನಡೆದುಕೊಂಡು ಬರುವುದು ಸಾಹಸವೆ ಆಗಿದೆ.
ರಸ್ತೆ ಬದಿಯಲ್ಲಿರುವ ಕಾಫಿ ತೋಟದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮದ ಜನತೆ ಮುಖ್ಯ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುವುದಕ್ಕೂ ಭಯ ಪಡುವ ವಾತಾವರಣ ಕಾಡಾನೆಗಳ ಸಮಸ್ಯೆಯಿಂದ ಎದುರಾಗಿದೆ. ಬಹುತೇಕ ಸಂದರ್ಭದಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಕಾರ್ಮಿಕರು ಕೆಲಸಕ್ಕೆ ತೆರಳುವ ಹಾಗೂ ವಾಪಾಸ್ಸು ಬರುವ ಸಂದರ್ಭದಲ್ಲಿಯೇ ಅನೇಕ ಘಟನೆಗಳು ಸಂಭವಿಸಿ ಆನೆಗಳ ದಾಳಿಗೆ ಒಳಗಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡ ಘಟನೆಗಳು ಈ ಗ್ರಾಮಗಳಲ್ಲಿ ನಡೆದಿದೆ.
ಗುಂಪು ಗುಂಪಾಗಿ ನೆಲೆ ನಿಂತಿರುವ ಕಾಡಾನೆಗಳ ಚಲನ ವಲನಗಳ ಹಾಗೂ ಅವುಗಳ ವಾಸಸ್ಥಳದ ಬಗ್ಗೆ ಮಾಹಿತಿ ಪಡೆಯಲು ಇದೀಗ ಅರಣ್ಯ ಇಲಾಖೆಯು ರೇಡಿಯೋ ಕಾಲರನ್ನು ಅಳವಡಿಸಲು ಮುಂದಾಗಿದೆ. ಈಗಾಗಲೇ ಪೊನ್ನಂಪೇಟೆ ವಲಯದ ಹುದಿಕೇರಿ ಹೋಬಳಿ ಹಾಗೂ ಪೊನ್ನಂಪೇಟೆ ಹೋಬಳಿಯ ಕುಂದ, ಈಚೂರು, ಹಳ್ಳಿಗಟ್ಟು ವಿ.ಬಾಡಗ, ಅರುವತ್ತೋಕ್ಲು ಕೊಂಗಣ, ಕುಟ್ಟಂದಿ, ಹುದಿಕೇರಿ ಹಾಗೂ ಹೈಸೊಡ್ಲೂರು, ಭಾಗದಲ್ಲಿ ಗುಂಪು ಗುಂಪಾಗಿ ನೆಲೆ ನಿಂತಿರುವ ಕಾಡಾನೆಗಳ ಪೈಕಿ ೩ ಕಾಡಾನೆಗಳಿಗೆ ರೇಡಿಯೋಕಾಲರ್೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಅಳವಡಿಸಲು ಇಲಾಖೆಯ ಅಧಿಕಾರಿಗಳು ನಿರ್ಧಾರ ಕೈಗೊಂಡಿದೆ.
ಸದ್ಯದಲ್ಲಿಯೇ ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸುವ ಕಾರ್ಯ ನಡೆಯಲಿದೆ.ಆ ಮೂಲಕ ಕಾಡಾನೆಗಳ ಗುಂಪು ಯಾವ ಪ್ರದೇಶಗಳಲ್ಲಿ ನೆಲೆ ನಿಂತಿವೆ ಎಂಬುದನ್ನು ಪತ್ತೆ ಹಚ್ಚುವ ಮೂಲಕ ಸ್ಥಳೀಯ ಗ್ರಾಮಸ್ಥರಿಗೆ ಮಾಹಿತಿ ನೀಡುವ ಉದ್ದೇಶವನ್ನು ಅರಣ್ಯ ಇಲಾಖೆ ಹೊಂದಿದೆ. ಇದರಿಂದ ಗ್ರಾಮದ ಜನತೆಗೆ ಕಾಡಾನೆಗಳ ಇರುವಿಕೆ ಬಗ್ಗೆ ಮಾಹಿತಿಗಳು ಲಭ್ಯವಾಗಲಿದೆ. ಇಲಾಖೆಯಲ್ಲಿ ಪ್ರಸ್ತುತ ಲಭ್ಯವಿರುವ ೩ ರೇಡಿಯೊ ಕಾಲರ್ಗಳಲ್ಲಿ ಪೊನ್ನಂಪೇಟೆ ವಲಯಕ್ಕೆ ೨ ಹಾಗೂ ತಿತಿಮತಿ ವಲಯಕ್ಕೆ ೧ ರೇಡಿಯೊ ಕಾಲರ್ನ್ನು ಅಳವಡಿಸಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಕಾಡಾನೆಗೆ ಅಳವಡಿಸುವ ರೇಡಿಯೊ ಕಾಲರ್ಗಳು ೧೨ರಿಂದ ೧೪ ಕೆಜಿ ತೂಕವುಳ್ಳದ್ದಾಗಿದೆ.