ಕೂಡಿಗೆ, ಜು. ೩೧: ಇಲ್ಲಿಗೆ ಸಮೀಪದ ಕೆರೆಕೇರಿ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಒಕ್ಕೂಟ ದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದು ಸದಸ್ಯರ ಜವಾಬ್ದಾರಿ ಯಾಗಿದೆ. ಆರ್ಥಿಕ ಮಟ್ಟ ಸುಧಾರಣೆಗೂ ಸಂಘ ಪೂರಕವಾಗಿರುತ್ತದೆ. ಇದನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಸನ ಡೈರಿ ಸಹಾಯಕ ನಿರ್ದೇಶಕ ಗಂಗಾಧರ ಮಾತನಾಡಿ, ರೈತರ ಬದುಕಿನಲ್ಲಿ ಹೈನುಗಾರಿಕೆ ಮಹತ್ವ ಪಡೆದಿದೆ ಎಂದರು. ಹಾಲು ಉತ್ಪಾದಕರ ಸಂಘಗಳ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಹಸುಗಳಿಗೆ ಚಿಕಿತ್ಸೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೆರೆಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರೇಖಾ ಪ್ರಸಾದ್, ಉಪಾಧ್ಯಕ್ಷೆ ಪ್ರೀತಿ ಪ್ರದೀಪ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಹಿರಿಯ ವಿಸ್ತಾರಣಾಧಿಕಾರಿ ಎಸ್. ಪಿ. ಗಂಗಾಧರ್, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಸಹಾಯಕ ವ್ಯವಸ್ಥಾಪಕ ಎಂ. ವೇಣುಗೋಪಾಲ, ಸಂಘದ ಕಾರ್ಯದರ್ಶಿ ಮಂಜಳಾ ಸೇರಿದಂತೆ ಇನ್ನಿತರರು ಹಾಜರಿದ್ದರು.