ನಾಪೋಕ್ಲು, ಜು. ೩೧: ಎಡೆಬಿಡದೆ ಸುರಿದ ಮಳೆಗೆ ವಾಣಿಜ್ಯ ಬೆಳೆ ಕಾಫಿ ಕೊಳೆ ರೋಗಕ್ಕೆ ತುತ್ತಾಗುತ್ತಿರುವ ಪರಿಣಾಮ ಫಸಲು ನಾಶವಾಗುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ.

ನಾಲ್ಕುನಾಡು ವ್ಯಾಪ್ತಿಯಲ್ಲಿ ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಅಲ್ಲಲ್ಲಿ ಕಾಫಿ ಗಿಡದ ಎಲೆಗಳು ಕೊಳೆತು ಬೀಳುತ್ತಿವೆ. ಕಾಫಿ ಫಸಲಿನ ಗೊಂಚಲುಗಳು ಕಪ್ಪಾಗಿ ಕೊಳೆಯುತ್ತಿವೆ. ಕಾಫಿ ಮಿಡಿಗಳು ಬೆಳೆಯುವ ಹಂತದಲ್ಲಿ ಉದುರುತ್ತಿರುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಆಘಾತ ಉಂಟು ಮಾಡಿದೆ.

ಕಾಫಿಗೆ ಪ್ರಸ್ತುತÀ ಉತ್ತಮ ಬೆಲೆ ಇದೆ. ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಬೇಸಿಗೆ ಅವಧಿಯಲ್ಲಿ ತೋಟಗಳಿಗೆ ತುಂತುರು ನೀರಾವರಿ ಮೂಲಕ ಕೆರೆಗಳಿಂದ ನೀರು ಹಾಯಿಸಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೆವು. ಸಕಾಲದಲ್ಲಿ ರಾಸಾಯನಿಕ ಗೊಬ್ಬರವನ್ನೂ ಪೂರೈಕೆ ಮಾಡಿದ್ದೆವು. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ ಫಸಲಿಗೆ ಧಕ್ಕೆ ಉಂಟಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಕೊಳೆರೋಗ ವ್ಯಾಪಿಸಿದ್ದು ಫಸಲು ಉದುರುತ್ತಿದೆ. ಮಳೆ ಗಾಳಿಯಿಂದಾಗಿ ತೋಟದಲ್ಲಿ ಕೆಲಸ ಮಾಡಲು ಕಾರ್ಮಿ ಕರು ನಿರಾಕರಿಸುತ್ತಿದ್ದಾರೆ ಎಂದು ಇಲ್ಲಿನ ಬೆಳೆಗಾರರು ನೋವು ತೋಡಿಕೊಳ್ಳುತ್ತಾರೆ. ಇದೀಗ ಕಾಫಿ ತೋಟಗಳಲ್ಲಿ ಕಳೆ ನಿರ್ಮೂಲನೆಯ ಸಮಯ. ಕಾಫಿ ಗಿಡಗಳಲ್ಲಿ ಇರುವ ಚಿಗುರು ತೆಗೆಯಲು ಕಳೆ ನಿರ್ಮೂಲನೆ ಮಾಡಲು ಸಕಾಲ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆ, ಕಾಫಿ ಬೆಳೆಗಾರರಿಗೆ ಆತಂಕ ತಂದೊಡ್ಡಿದೆ. ಕಳೆದ ವರ್ಷ ಕಾಳು ಮೆಣಸಿನ ಇಳುವರಿ ಕುಂಠಿತಗೊAಡಿತ್ತು ಈ ವರ್ಷ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೆವು. ಇದೇ ರೀತಿ ಮಳೆ ಮುಂದುವರಿದರೆ ಕಾಫಿಯೊಂದಿಗೆ ಕಾಳು ಮೆಣಸಿನ ಫಸಲೂ ಕೈತಪ್ಪುವ ಸಾಧ್ಯತೆ ಇದೆ ಎಂಬುದು ನಾಲ್ಕುನಾಡಿನ ಬೆಳೆಗಾರರ ಅಳಲು.

- ದುಗ್ಗಳ