ಗಣಪತಿ ಉತ್ಸವ ಸಮಿತಿಗಳಿಗೆ ಎಸ್.ಪಿ. ರಾಮರಾಜನ್ ಕರೆ

ಮಡಿಕೇರಿ, ಜು. ೩೦: ಸರಕಾರ ಹಾಗೂ ನ್ಯಾಯಾಲಯದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವುದರೊಂದಿಗೆ ಸಂಸ್ಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಗೌರಿ-ಗಣೇಶೋತ್ಸವವನ್ನು ಆಚರಿಸಿ ಎಂದು ಗಣಪತಿ ಉತ್ಸವ ಸಮಿತಿಗಳ ಪ್ರಮುಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕರೆ ನೀಡಿದರು.

ನಗರದ ಕಾವೇರಿ ಹಾಲ್‌ನಲ್ಲಿ ಮಡಿಕೇರಿ ಉಪವಿಭಾಗಕ್ಕೆ ಒಳಪಡುವ ಊರುಗಳ ಗಣಪತಿ ಉತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಗಣಪತಿ ಉತ್ಸವಕ್ಕೆ ಅದರದ್ದೇ ಆದ ಇತಿಹಾಸವಿದೆ. ಈ ಉತ್ಸವದಲ್ಲಿ ಶ್ರದ್ಧೆ ಹಾಗೂ ಭಕ್ತಿಗೆ ಮೊದಲ ಆದ್ಯತೆ ನೀಡಬೇಕು. ಮೋಜು-ಮಸ್ತಿಗೆ ಮಾತ್ರ ಗಣೇಶೋತ್ಸವ ಸೀಮಿತವಾಗಬಾರದು. ಉತ್ಸವ ಸಮಿತಿ ಪ್ರಮುಖರು ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸುವತ್ತ ಗಮನಹರಿಸಬೇಕು. ಆಚರಣೆಯ ಸಲುವಾಗಿ ಇರುವಂತಹ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಡಿಜೆ ಬಳಕೆಯಿಂದ ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ತೊಂದರೆಯಾಗುತ್ತದೆ; ಪಟಾಕಿ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಡಿಜೆ ಬಳಕೆ ಸಂಬAಧ ನಿಯಮ ಮೀರಬಾರದು. ಒಂದು ವೇಳೆ ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನೀತಿ ನಿಯಮಗಳನ್ನು ನಮಗಾಗಿ ಮಾಡಿರುವುದಲ್ಲ. ಸಾರ್ವಜನಿಕರ ಒಳಿತಿಗಾಗಿ ಮಾಡಿರುವುದು. ಆದ್ದರಿಂದ ಇರುವ ನಿಯಮಗಳನ್ನು ಎಲ್ಲಾ ಸಮಿತಿಗಳು ಪಾಲಿಸಬೇಕು. ಕೆಲವೊಂದುವಿಚಾರಗಳಲ್ಲಿ ಪೊಲೀಸ್ ಇಲಾಖೆ ಉತ್ಸವ ಸಮಿತಿಗಳಿಗೆ ಅಗತ್ಯ ಸಹಕಾರ ನೀಡುತ್ತದೆ. ಏಕಗವಾಕ್ಷಿ ಮೂಲಕ ಉತ್ಸವ ಸಮಿತಿಗಳಿಗೆ ಉತ್ಸವ ಆಚರಣೆಗೆ ಶೀಘ್ರ ಅನುಮತಿ ಕೊಡಲು ಇಲಾಖೆಯಿಂದ ಕ್ರಮಕೈಗೊಳ್ಳಲಾಗುವುದು. ‘ನಿಯಮ ಪಾಲನೆಯಾಗದಿದ್ದಾಗ ಸಾರ್ವಜನಿಕರು, ನ್ಯಾಯಾಲಯ, ಹಿರಿಯ ಅಧಿಕಾರಿಗಳು ನÀನ್ನನ್ನು ಪ್ರಶ್ನಿಸುತ್ತಾರೆ. ಆದ್ದರಿಂದ ನಿಯಮಗಳ ಉಲ್ಲಂಘನೆಯಾಗುವುದನ್ನು ನೋಡಿಕೊಂಡು ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ’ ಎಂದು ರಾಮರಾಜನ್ ಸ್ಪಷ್ಟಪಡಿಸಿದರು.

ನಿಯಮಗಳು ಉಲ್ಲಂಘನೆಯಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಉತ್ಸವ ಆಚರಣೆ ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಬೇಕು. ಎಲ್ಲರೂ ಭಾಗವಹಿಸುವಂತಹ ವಾತಾವರಣವನ್ನು ಸಮಿತಿಗಳು ನಿರ್ಮಾಣ ಮಾಡಬೇಕೇ ಹೊರತು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಉತ್ಸವ ಆಚರಣೆ ನಡೆಯಬಾರದು ಎಂದು ಎಸ್.ಪಿ. ಅಭಿಪ್ರಾಯಪಟ್ಟರು.

ಬಲಾತ್ಕಾರದಿಂದ ಚಂದಾ ವಸೂಲಿ ಮಾಡಬಾರದು. ನಿಯಮಗಳನ್ನು ಮೀರಿ ಯಾವುದೇ ಅನಾಹುತಗಳಿಗೆ ಉತ್ಸವ ಸಮಿತಿಗಳು ಆಸ್ಪದ ನೀಡಬಾರದು ಎಂದು ಅವರು ಎಚ್ಚರಿಕೆಯಿತ್ತರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ಶಾಂತಿ ಹಾಗೂ ನೆಮ್ಮದಿಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ಖ್ಯಾತಿಯನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರಿಂದ ಇಲ್ಲಿನ ಪರಿಸರಕ್ಕೆ, ಇಲ್ಲಿನ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಗಣೇಶೋತ್ಸವ ಆಚರಣೆ ನಡೆಯಬೇಕು. ಡಿಜೆ ಬಳಕೆ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲನೆಯಾಗಬೇಕಾಗಿದೆ. ಉತ್ಸವ ಆಚರಣೆ ಸಂಬAಧ ಇರುವ ನಿಯಮಗಳನ್ನು ಪಾಲಿಸುವ ಮೂಲಕ ಉತ್ಸವವನ್ನು ಶ್ರದ್ಧಾಭಕ್ತಿಯಿಂದ, ಅಚ್ಚುಕಟ್ಟಾಗಿ ಆಚರಿಸುವುದರೊಂದಿಗೆ ಉತ್ಸವ ಸಮಿತಿಗಳು ಮುಂದಿನ ಜನಾಂಗಕ್ಕೆ ಸ್ಫೂರ್ತಿಯಾಗಬೇಕೆಂದು ಹೇಳಿದರು.

ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು ಮಾತನಾಡಿ, ಉತ್ಸವ ಸಮಿತಿಯವರು ಯಾವುದೇ ತೊಂದರೆಗಳಾಗದ ರೀತಿಯಲ್ಲಿ ಉತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಬೇಕು. ಪೊಲೀಸರೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ನುಡಿದರು.

ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಹಿಂದೂಗಳ ಪವಿತ್ರ ಹಬ್ಬವಾಗಿರುವ ಗಣೇಶೋತ್ಸವದಲ್ಲಿ ಮದ್ಯಪಾನ, ಮೋಜು-ಮಸ್ತಿ ನಡೆಯಬಾರದು. ಶ್ರದ್ಧಾಭಕ್ತಿಯಿಂದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ಆಚರಣೆ ನಡೆಯಬೇಕು ಎಂದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಗಣೇಶೋತ್ಸವದಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಯಾವುದೇ ವಿಘ್ನಗಳು ಎದುರಾಗದ ರೀತಿಯಲ್ಲಿ ಉತ್ಸವ ಆಚರಣೆ ಮಾಡಲು ಉತ್ಸವ ಸಮಿತಿಗಳು ಗಮನಹರಿಸಬೇಕೆಂದರು.

ಸಮಿತಿಗಳ ಅಹವಾಲು ಆಲಿಕೆ

ಇದೇ ಸಂದರ್ಭ ಎಸ್.ಪಿ. ರಾಮರಾಜನ್ ಅವರು ಉತ್ಸವ ಸಮಿತಿಗಳ ಅಹವಾಲನ್ನು ಆಲಿಸಿದರು.

ಈ ವೇಳೆ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಗಣೇಶೋತ್ಸವಕ್ಕೆ ಮಾತ್ರ ಹೆಚ್ಚಿನ ನಿಯಮಗಳನ್ನು ಜಾರಿ ಮಾಡಲಾಗುತ್ತದೆ. ಆದರೆ, ಅನ್ಯಧರ್ಮದ ಆಚರಣೆಗಳಿಗೆ ನಿಯಮಗಳು ಇರುವುದೇ ಇಲ್ಲ ಎಂದು ಆರೋಪಿಸಿದರಲ್ಲದೆ ನಿಯಮಿತ ಶಬ್ದದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಬೇಕೆಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಪಿ., ಹಬ್ಬದ ವಿಚಾರದಲ್ಲಿ ಪೊಲೀಸ್ ಇಲಾಖೆ ಅಗತ್ಯ ಸಹಕಾರ ನೀಡುತ್ತದೆ. ಆದರೆ, ಆಚಾರ-ವಿಚಾರವನ್ನು ಹಾಳುಮಾಡುವ ಕೃತ್ಯಕ್ಕೆ ಮುಂದಾದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತ್ಯಾಗರಾಜನಗರ ಗಣಪತಿ ಸಮಿತಿ ಪ್ರತಿನಿಧಿಯೊಬ್ಬರು ಮಾತನಾಡಿ, ಪೊಲೀಸ್ ಫೆಸ್ಟ್ಗಳಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಆದರೆ, ಗಣೇಶೋತ್ಸವದಲ್ಲಿ ನಿರ್ಬಂಧ ಹೇರಲಾಗುತ್ತದೆ. ಇದು ಸರಿಯೇ? ಎಂದು ಪ್ರಶ್ನಿಸಿದರು.

ಅಲ್ಲದೆ ಗಣಪತಿ ವಿಸರ್ಜನೆಗೆ ರಾತ್ರಿ ೧೦ ಗಂಟೆ ಎಂದು ಸಮಯ ನೀಡಿ ೯ ಗಂಟೆಯಾಗುತ್ತಿದAತೆ ಕೆಲ ಪೊಲೀಸರು ಸಮಿತಿ ಪ್ರಮುಖರ ಮೇಲೆ ಒತ್ತಡ ಹಾಕುವುದಲ್ಲದೆ ಕೆಟ್ಟ ಪದಗಳಿಂದ ನಿಂದಿಸುತ್ತಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಪಿ. ಪಟಾಕಿ ಬಳಸಬಾರದೆಂದು ಇಲಾಖೆ ಹೇಳುತ್ತಿಲ್ಲ. ಜನಸಂದಣಿ ಇರುವ ಕಡೆಗಳಲ್ಲಿ ಹೆಚ್ಚಿನ ಪಟಾಕಿ ಸಿಡಿಸಿ ಜನರಿಗೆ ತೊಂದರೆಯಾಗದAತೆ ಎಚ್ಚರವಹಿಸಿ ಎಂಬುದಷ್ಟೇ ನಮ್ಮ ಸೂಚನೆ ಎಂದರು. ವಿನಾಃಕಾರಣ ಸಮಿತಿ ಸದಸ್ಯರಿಗೆ ತೊಂದರೆ ನೀಡದಂತೆ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಬಿ.ಕೆ. ಜಗದೀಶ್ ಮಾತನಾಡಿ, ಏಕಗವಾಕ್ಷಿ ನಿಯಮ ಸಮರ್ಪಕವಾಗಿ ಅನುಷ್ಠಾನವಾಗಬೇಕು. ಎಲ್ಲಾ ಇಲಾಖೆಗಳು ಒಂದೇ ಕಡೆ ಸೇರಿ ಅನುಮತಿಗಳನ್ನು ನೀಡುವಂತಾಗಬೇಕೆAದರು. ಈ ಸಂಬAಧ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಎಸ್.ಪಿ. ಭರವಸೆಯಿತ್ತರು.

ಶಾಂತಿನಿಕೇತನ ಸಮಿತಿಯ ಚೇತನ್ ಮಾತನಾಡಿ, ಗಣಪತಿ ವಿಸರ್ಜನಾ ಮೆರವಣಿಗೆ ಮಾರ್ಗವನ್ನು ಪೊಲೀಸ್ ಇಲಾಖೆ ತೀರ್ಮಾನ ಮಾಡುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರಲ್ಲದೆ ಏಕಗವಾಕ್ಷಿ ನಿಯಮ ಆದಷ್ಟು ಬೇಗ ಜಾರಿಯಾಗಬೇಕೆಂದರು.

ಎಸ್.ಪಿ ರಾಮರಾಜನ್ ಮಾತನಾಡಿ, ಮೆರವಣಿಗೆ ಮಾರ್ಗಕ್ಕೆ ನಾವು ಯಾವುದೇ ರೀತಿಯಲ್ಲಿಯೂ ಅಡ್ಡಿ ಮಾಡುವುದಿಲ್ಲ. ಜನಸಂದಣಿ ಹೆಚ್ಚಾದರೆ ಮಾತ್ರ ಅಗತ್ಯವಾದ ಕ್ರಮಕೈಗೊಳ್ಳುತ್ತೇವೆ ಎಂದರು.

ಎ.ಎಸ್.ಪಿ. ದಿನೇಶ್ ಕುಮಾರ್ ಮಾತನಾಡಿ, ಮೆರವಣಿಗೆ ಮಾರ್ಗವನ್ನು ನಾವು ತೀರ್ಮಾನಿಸುವುದಿಲ್ಲ. ಅದು ಸಮಿತಿಗಳಿಗೆ ಬಿಟ್ಟ ವಿಚಾರ. ಆದರೆ, ಒಮ್ಮೆ ಸಮಿತಿಗಳು ತಮ್ಮ ಉತ್ಸವ ಮೂರ್ತಿಯ ಮೆರವಣಿಗೆ ಮಾರ್ಗವನ್ನು ಪೊಲೀಸ್ ಇಲಾಖೆಗೆ ನೀಡಿದ ನಂತರ ಯಾವುದೇ ಬದಲಾವಣೆ

ಶಬ್ದಮಿತಿ ಪಾಲಿಸುವಂತೆ ಸೂಚನೆ ಪಿ.ಓ.ಪಿ. ಮೂರ್ತಿಗಳಿಗೆ ಅವಕಾಶವಿಲ್ಲ ಮಾಡುವಂತಿಲ್ಲ ಎಂದರು. ನಗರಸಭಾ ಮಾಜಿ ಸದಸ್ಯ ಉಣ್ಣಿಕೃಷ್ಣ ಮಾತನಾಡಿ, ಗಣಪತಿ ಉತ್ಸವ ಸಂದರ್ಭ ಬೇರೆ ಕಡೆಯಿಂದ ಬಂದು ಮದ್ಯ, ಗಾಂಜಾ ಸೇವಿಸಿ ತೊಂದರೆ ಉಂಟುಮಾಡುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕೆಂದರು. ಆ ರೀತಿ ತೊಂದರೆ ಉಂಟು ಮಾಡುವವರನ್ನು ವಶಕ್ಕೆ ಪಡೆದು ಠಾಣೆಯಲ್ಲಿರಿಸಿ ಉತ್ಸವದ ನಂತರ ಬಿಡುಗಡೆ ಮಾಡುವುದಾಗಿ ಎಸ್.ಪಿ. ಹೇಳಿದರು. ಉತ್ಸವ ಸಂದರ್ಭ ಅಕ್ರಮ ಮದ್ಯ ಮಾರಾಟ ನಡೆಯುವ ಬಗ್ಗೆ ಸಮಿತಿ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ ಮಾತನಾಡಿದ ಎ.ಎಸ್.ಪಿ. ದಿನೇಶ್ ಕುಮಾರ್, ಅಕ್ರಮ ಮದ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ವೇದಿಕೆಯಲ್ಲಿ ತಹಶೀಲ್ದಾರ್ ಶ್ರೀಧರ್, ಡಿವೈಎಸ್‌ಪಿ ಸೂರಜ್, ವಿಶೇಷ ಘಟಕದ ನಿರೀಕ್ಷಕ ಐ.ಪಿ. ಮೇದಪ್ಪ, ಗ್ರಾಮಾಂತರ ಠಾಣೆ ನಿರೀಕ್ಷಕ ಚಂದ್ರಶೇಖರ್, ಅಗ್ನಿಶಾಮಕ ದಳ ಅಧಿಕಾರಿ ಚಂದ್ರಶೇಖರ್ ಭಂಡಾರಿ, ತಾ.ಪಂ. ಎ.ಡಿ. ಸುನಿತ, ಆರ್.ಟಿ.ಓ. ನಿರೀಕ್ಷಕ ಮೋಹನ್ ಕುಮಾರ್ ಉಪಸ್ಥಿತರಿದ್ದರು.

ವೀರಾಜಪೇಟೆ, ಜು. ೩೦: ಗಣೇಶೋತ್ಸವ ಆಡಂಬರದ ಆಚ ರಣೆಯಾಗುವದಕ್ಕಿಂತ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಸಾಂಪ್ರದಾಯಿಕ ಆಚರಣೆ ಆಗಲಿ. ಗಣೇಶೋತ್ಸವ ಒಂದು ದೇವರ ಕಾರ್ಯಕ್ರಮವಾಗಿದ್ದು ಉತ್ಸವ ಯಶಸ್ವಿಯಾಗಿ ನಡೆಯಲು ಉತ್ತಮವಾದ ಸಂಘಟನೆ ಅಗತ್ಯವಾಗಿದೆ. ಕಾನೂನಿನ ಚೌಕಟ್ಟನ್ನು ಮೀರದೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಒದಗಿಸಿ ಯಶಸ್ವಿಯಾಗಿ ಗಣೇಶೋತ್ಸವ ಆಚರಿಸಿ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೆ. ರಾಮರಾಜನ್ ಹೇಳಿದರು. ವೀರಾಜಪೇಟೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಗಣೇಶೋತ್ಸವ ಸಂಘಟಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಗೌರಿ ಗಣೇಶ ಉತ್ಸವ ಸಮಿತಿಯವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆಗೆ ಪೂರಕವಾಗುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು.

ಸಿಡಿಮದ್ದು ಪ್ರದರ್ಶನ ಹಾಗೂ ಡಿ.ಜೆಗೆ ಅವಕಾಶ ಕಲ್ಪಿಸಿ ಕೊಡಲಾಗಿದ್ದು, ನಿರ್ದಿಷ್ಟ ಶಬ್ದದ ಮಿತಿಯನ್ನು ಮೀರದಂತೆ ಸಂಘಟಕರು ಎಚ್ಚರ ವಹಿಸಬೇಕು. ಪಿ.ಓ.ಪಿ ೪ಆರನೇ ಪುಟಕ್ಕೆ (ಮೊದಲ ಪುಟದಿಂದ) ಮೂರ್ತಿಗಳನ್ನು ಬಳಸಲು ಅವಕಾಶವಿಲ್ಲ. ಶೋಭಾ ಯಾತ್ರೆಯಂದು ಮದ್ಯಪಾನ ಮಾಡಿ ಗಲಭೆ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಪೊಲೀಸರ ೧೫ ರಿಂದ ೨೦ ತಂಡಗಳನ್ನು ರಚಿಸಲಾಗುತ್ತದೆ. ಶೋಭಾಯಾತ್ರೆಯ ಸಂದರ್ಭ ಯಾವುದೇ ವ್ಯಕ್ತಿ ಅಥವಾ ಯಂತ್ರದ ಮೂಲಕ ಬೆಂಕಿ ಉಗುಳುವುದನ್ನು ನಿಷೇಧಿಸಲಾಗಿದೆ.

ಈ ರೀತಿ ಅಪಾಯಕಾರಿ ಸಾಹಸ ಯಾರಾದರೂ ಮಾಡಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಶೋಭಾಯಾತ್ರೆಯ ಮಂಟಪವು ವಾಹನದ ಅಳತೆಗೆ ಸಮರ್ಪಕವಾಗಿರಲಿ. ಆಡಂಬರದ ಹಿನ್ನೆಲೆಯಲ್ಲಿ ದೊಡ್ಡ ಮಂಟಪಗಳನ್ನು ಮಾಡಿ ಆಯತಪ್ಪಿ ಬಿದ್ದು ಅಪಘಾತವಾಗದಂತೆ ಎಚ್ಚರ ವಹಿಸಬೇಕು.

ವಿಸರ್ಜನೆ ಸ್ಥಳಗಳಲ್ಲಿ ವಿಶೇಷವಾದಂತಹ ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಕರೆ ನೀಡಿದ ಅವರು ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗದಂತೆ ಕಾನೂನು ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು. ಕಾನೂನಿನ ಯಾವುದಾದರೂ ನಿಯಮವನ್ನು ಮೀರಿದ್ದಲ್ಲಿ ಉತ್ಸವ ಸಮಿತಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಿಂಗಲ್ ವಿಂಡೋ ಸಿಸ್ಟಮ್ ಆರಂಭಿಸಲಾಗಿದ್ದು, ಉತ್ಸವ ಸಮಿತಿಗಳು ಚೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಠಾಣೆ, ಆರ್‌ಟಿಓ, ತಹಶೀಲ್ದಾರ್ ಕಚೇರಿ, ಅರಣ್ಯ ಇಲಾಖೆ ಮುಂತಾದ ಕಡೆಯಲ್ಲಿ ಸೂಕ್ತ ದಾಖಲೆಯನ್ನು ನೀಡಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಉತ್ಸವ ನಡೆಸುವಂತೆ ಹೇಳಿದರು.

ಈ ಸಂದರ್ಭ ಮಾತನಾಡಿದ ಆಟೋ ಚಾಲಕ ಸಂಘದ ಅಧ್ಯಕ್ಷರು ಶೋಭಾಯಾತ್ರೆ ದಿನ ೭ ಗಂಟೆಗಳ ತನಕ ನಗರದ ಮುಖ್ಯರಸ್ತೆಗಳಲ್ಲಿ ಆಟೋ ಚಾಲನೆಗೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

ವೀರಾಜಪೇಟೆ ನಗರದ ಗಣೇಶೋತ್ಸವ ಸಮಿತಿಯವರು ಶೋಭಾಯಾತ್ರೆಗೂ ಮುನ್ನ ನಗರದ ಮುಖ್ಯ ರಸ್ತೆಗಳಲ್ಲಿರುವ ಹಳ್ಳಗಳನ್ನು ಮುಚ್ಚುವಂತೆ ಆಗ್ರಹಿಸಿದರು.

ಪುರಸಭೆ ಅಧ್ಯಕ್ಷರಾದ ಎಂ.ಕೆ. ದೇಚಮ್ಮ ಮಾತನಾಡಿ, ವೀರಾಜಪೇಟೆ ಗೌರಿ ಗಣೇಶ ಉತ್ಸವ ಸಾಮರಸ್ಯದಿಂದ ಎಲ್ಲಾ ಜನಾಂಗದ ಜನರು ಆಚರಣೆ ಮಾಡುವ ಹಬ್ಬವಾಗಿದೆ. ಅಲ್ಲದೆ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ದಿನ ರಾತ್ರಿ ನಗರಕ್ಕೆ ಆಗಮಿಸುವ ನಾಲ್ಕು ದಿಕ್ಕಿನಲ್ಲಿ ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡುವಂತೆ ತಿಳಿಸಿದರು.

ಗಣೇಶೋತ್ಸವ ನಾಡ ಹಬ್ಬದ ಅಧ್ಯಕ್ಷರಾದ ಶಭರೀಶ್ ಮಾತನಾಡಿ, ವೀರಾಜಪೇಟೆ ಗೌರಿ ಗಣೇಶ ಉತ್ಸವ ಇತಿಹಾಸ ಪ್ರಸಿದ್ಧವಾಗಿದೆ. ೧೯೮೬ರಲ್ಲಿ ನಡೆದ ಒಂದು ಘಟನೆ ಬಿಟ್ಟರೆ ಉಳಿದ ಎಲ್ಲಾ ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ಉತ್ಸವ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ವೇದಿಕೆಯ ಮೇಲೆ ವೀರಾಜಪೇಟೆ ತಹಶೀಲ್ದಾರ್ ಅನಂತಶAಕರ್, ಪುರಸಭೆಯ ಅಧ್ಯಕ್ಷೆ ದೇಚಮ್ಮ, ಉಪಾಧ್ಯಕ್ಷೆ ಫಸಿಹಾ ತಬುಸುಂ, ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್, ಮೇದಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಚೆಸ್ಕಾಂ, ಪಿಡಬ್ಲ್ಯೂಡಿ, ಆರ್‌ಟಿಓ, ಕೆಎಸ್‌ಆರ್‌ಟಿಸಿ, ಅರಣ್ಯ ಇಲಾಖೆ, ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ವೀರಾಜಪೇಟೆ ತಾಲೂಕು ವ್ಯಾಪ್ತಿಯ ೪೦ಕ್ಕೂ ಅಧಿಕ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.