ಭಾಗಮಂಡಲ, ಜು. ೩೧: ಭಾಗಮಂಡಲ ವ್ಯಾಪ್ತಿಯಲ್ಲಿ ಜೆರಾಕ್ಸ್ ನೋಟುಗಳ ಹಾವಳಿಯಿಂದಾಗಿ ಜನರು ಪರಿತಪಿಸುವಂತಾಗಿದೆ. ಅಲ್ಲಲ್ಲಿ ಜೆರಾಕ್ಸ್ ನೋಟುಗಳು ಚಲಾವಣೆಯಲ್ಲಿದ್ದು ಜನಸಾಮಾನ್ಯರು ನಷ್ಟ ಅನುಭವಿಸುವಂತಾಗಿದೆ. ಜೆರಾಕ್ಸ್ ನೋಟುಗಳ ಮುದ್ರಿಸುವ ವ್ಯವಸ್ಥಿತ ಜಾಲ ಒಂದಿದೆ ಎಂಬ ಸಂಶಯ ನಾಗರಿಕ ವಲಯದಲ್ಲಿ ವ್ಯಕ್ತವಾಗಿದೆ.
ಸ್ಥಳೀಯ ಯುವಕರೊಬ್ಬರಿಗೆ ಈಚೆಗೆ ೧೦,೦೦೦ ಬಂಡಲ್ನಲ್ಲಿ ಎರಡು ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಬ್ಯಾಂಕಿನಲ್ಲಿ ಚಲಾವಣೆಗೆ ನೀಡಿದ ಸಂದರ್ಭ ಈ ಅಂಶ ಬೆಳಕಿಗೆ ಬಂದಿದೆ. ಇದೇ ರೀತಿ ಹಲವರ ಕೈಯಲ್ಲಿ ಜೆರಾಕ್ಸ್ ನೋಟುಗಳು ಓಡಾಡುತ್ತಿವೆ. ಪಿಗ್ಮಿ ಸಂಗ್ರಹಕಾರರ ಕೈಯಲ್ಲೂ ಜೆರಾಕ್ಸ್ ನೋಟುಗಳು ಲಭಿಸಿವೆ. ಹಿರಿಯರು, ಮೊಬೈಲ್ ಮೂಲಕ ವ್ಯವಹಾರ ನಡೆಸಲು ಅಶಕ್ತರಾದವರು ನಗದು ವ್ಯವಹಾರವನ್ನೇ ನೆಚ್ಚಿಕೊಂಡಿದ್ದಾರೆ. ಜೆರಾಕ್ಸ್ ನೋಟುಗಳ ಜಾಲದಿಂದಾಗಿ ಇದೀಗ ಅವರು ಮೋಸ ಹೋಗುತ್ತಿದ್ದಾರೆ. ನಗದು ಬಳಸುವವರು ಇದೀಗ ಎಚ್ಚರಿಕೆಯಿಂದ ಹಣ ಚಲಾವಣೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಸಂಬAಧಪಟ್ಟವರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಕೋರಿದ್ದಾರೆ.
- ಸುನಿಲ್ ಕುಯ್ಯಮುಡಿ