ಸೋಮವಾರಪೇಟೆ, ಆ. ೧: ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ತೋಳೂರು-ಶೆಟ್ಟಳ್ಳಿ ಅಯುಷ್ಮಾನ್ ಅರೋಗ್ಯ ಮಂದಿರ ವತಿಯಿಂದ ತೋಳೂರುಶೆಟ್ಟಳ್ಳಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಡೆಂಗ್ಯೂ ಮುಕ್ತ ಶಾಲಾ ಆವರಣ ಮತ್ತು ಪ್ರಥಮ ಚಿಕಿತ್ಸೆ ಬಗೆಗಿನ ಜಾಗೃತಿ ಕಾರ್ಯಾಗಾರ ನಡೆಯಿತು.
ವೈದ್ಯಕೀಯ ಪ್ರಥಮ ಚಿಕಿತ್ಸೆ ಹಾಗೂ ಹೃದಯ ಶ್ವಾಸಕೋಶದ ಪುನರ್‌ಜೀವದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮತ್ತು ತಂಡದವರು ಬಾಲಕಿಯರಿಗೆ ಮಾಹಿತಿ ನೀಡಿದರು.
ಶಾಲಾ ಆವರಣ ಸ್ವಚ್ಛವಾಗಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ವಿದ್ಯಾರ್ಥಿನಿಯರು ಒತ್ತಡ ಮುಕ್ತ ಜೀವನವನ್ನು ರೂಢಿಸಿಕೊಳ್ಳಬೇಕು. ಜಂಕ್ ಫುಡ್ ಸೇವಿಸುವುದನ್ನು ನಿಲ್ಲಿಸಬೇಕು. ಪೌಷ್ಟಿಕಾಂಶವಿರುವ ಮಿತ ಆಹಾರವನ್ನು ಸೇವಿಸಿದರೆ ತರಗತಿಯಲ್ಲಿ ಲವಲವಿಕೆಯಿಂದ ಇರಬಹುದು ಎಂದು ಶಾಂತಿ ತಿಳಿಸಿದರು.
ಅರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ನವೀನ್ ಪ್ರಾತ್ಯಕ್ಷಿಕೆಯ ಮೂಲಕ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳು ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ೨೪೫ ವಿದ್ಯಾರ್ಥಿಗಳು ಭಾಗವಹಿಸಿದ್ದರು.