ಮಡಿಕೇರಿ, ಜು. ೩೧: ಮಕ್ಕಂದೂರು ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಸಂಘದ ವತಿಯಿಂದ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಅಕ್ಷಯ್ ಕುಮಾರ್, ನಾಯಕಿಯಾಗಿ ಜ್ಯೋತಿ ಚುನಾಯಿತಗೊಂಡರು.

ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ, ಮತಯಂತ್ರ, ಚುನಾವಣಾ ಅಧಿಕಾರಿಗಳ ನೇಮಕ ಇವುಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗಿತ್ತು. ಮತಪೆಟ್ಟಿಗೆ, ಮತ ಚೀಟಿಗಳ ಬದಲು ಮೊಬೈಲ್‌ನಲ್ಲಿ ಮತಯಂತ್ರಗಳನ್ನು ಬಳಸಿ ಮಕ್ಕಳು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು. ಒಂದು ಮೊಬೈಲ್ ಅನ್ನು ಇವಿಎಂ ಆಗಿ, ಮತ್ತೊಂದು ಮೊಬೈಲ್ ಕಂಟ್ರೋಲ್ ಯೂನಿಟ್ ಆಗಿ ಬಳಸಲಾಯಿತು.

ಚುನಾವಣಾ ಆಯುಕ್ತರಾಗಿ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಕಾರ್ಯ ನಿರ್ವಹಿಸಿದರು. ಶಿಕ್ಷಕಿ ಆರ್. ಗೀತಾ, ಲೀಲಾವತಿ, ವನಜಾಕ್ಷಿ, ಪ್ರಮೀಳಾ ಅವರು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.