ಕರಿಕೆ, ಜು. ೩೧: ಅಕ್ರಮವಾಗಿ ಮರಗಳ ನಾಟ ಸಾಗಾಟ ಪ್ರಕರಣ ಪತ್ತೆ ಹಚ್ಚಿರುವ ಅರಣ್ಯ ಸಂಚಾರಿ ದಳ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮಾಲುಗಳನ್ನು ವಶಪಡಿಸಿಕೊಂಡಿದೆ.
ಉಲುಗುಲಿ ಗ್ರಾಮದಿಂದ ಸುಂಟಿಕೊಪ್ಪ ಮಾರ್ಗವಾಗಿ ಕುಶಾಲನಗರ ಕಡೆಗೆ ಪಿಕಪ್ (ಕೆ.ಎ.-೧೨-ಬಿ.-೧೮೮೧) ವಾಹನದಲ್ಲಿ ನೇರಳೆ ಮತ್ತು ಕಾಡು ಜಾತಿಯ ಮರದ ನಾಟ ಮತ್ತು ಸೌದೆಯನ್ನು ಸಾಗಿಸುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಡಿಕೇರಿ ಅರಣ್ಯ ಸಂಚಾರಿ ದಳ ಅಧಿಕಾರಿ, ಸಿಬ್ಬಂದಿಗಳು ಮರದ ನಾಟಗಳನ್ನು ವಶಪಡಿಸಿಕೊಂಡು ಉಲುಗುಲಿ ಗ್ರಾಮದ ಬಶೀರ್ ಕೆ.ಎಂ. ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿದೆ.
ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ಹುಸೇನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಗಾನಶ್ರೀ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಜಗದೀಶ್, ಶ್ರೀನಿವಾಸ್, ಹಾಲೇಶ್, ರಿಷಾ ಪಾರ್ವತಿ ಮತ್ತು ವಾಹನ ಚಾಲಕ ಪ್ರಕಾಶ್ ಪಾಲ್ಗೊಂಡಿದ್ದರು.