ಮಡಿಕೇರಿ, ಆ. ೧: ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಸರಕಾರಿ ಕಚೇರಿಯೊಂದು ಶಿಥಿಲಗೊಂಡು ಅಪಾಯದ ಮುನ್ಸೂಚನೆ ತೋರುತ್ತಿದ್ದು, ಸಿಬ್ಬಂದಿ ವರ್ಗ ಪರದಾಡುವಂತಾಗಿದೆ.

ನಗರದ ಕೋಟೆ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಯೇ ನೀರಿನಿಂದ ಆವೃತವಾಗಿ ಅಪಾಯದಂಚಿನಲ್ಲಿದೆ. ತೀವ್ರ ಮಳೆಯಿಂದ ಕಟ್ಟಡವೂ ಸಂಪೂರ್ಣ ಶಿಥಿಲಗೊಂಡಿದೆ. ಅದಲ್ಲದೆ ಮಳೆ ನೀರು ಕಚೇರಿ ಒಳಗೆ ಸೋರುತ್ತಿರುವ ಪರಿಣಾಮ ಸಿಬ್ಬಂದಿ ವರ್ಗಕ್ಕೆ ಕೆಲಸ ಮಾಡಲು ಕಷ್ಟಕರ ಸನ್ನಿವೇಶ ಸೃಷ್ಟಿಯಾಗಿದೆ.

ಕಚೇರಿಯ ಗೋಡೆಗಳು ಬಿರುಕು ಬಿಟ್ಟು, ಕಟ್ಟಡ ಕಾಡು ತುಂಬಿ ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಈಗಾಗಲೇ ಬಹುತೇಕ ಕಚೇರಿಗಳು ಹೊಸ ಕಟ್ಟಡಗಳಿಗೆ ಸ್ಥಳಾಂತರಗೊAಡಿದ್ದು, ಈ ವಿಭಾಗ ಮಾತ್ರ ಕೋಟೆ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಳೆ ಹೆಚ್ಚಾದರೆ ಕಚೇರಿಯೊಳಗೆ ಅರ್ಧ ಅಡಿಯಷ್ಟು ನೀರು ನಿಲ್ಲುತ್ತದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಸೂಕ್ತ ಕ್ರಮ ಇದುವರೆಗೂ ಅಧಿಕಾರಿಗಳು ಕೈಗೊಂಡಿಲ್ಲ. ಕಚೇರಿ ಸ್ಥಳಾಂತರಕ್ಕೂ ಮುಂದಾಗದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.