ಮಡಿಕೇರಿ, ಜು. ೩೧: ಕೊಡಗು ಪತ್ರಕರ್ತರ ಸಂಘದ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಅಮ್ಮತ್ತಿ ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ಸಹಯೋಗದಲ್ಲಿ ಆ. ೩ ರಂದು ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮದೋಷ್ ಪೂವಯ್ಯ ಮಾಹಿತಿ ನೀಡಿದ್ದಾರೆ.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ಕಾವಾಡಿ ಅಮ್ಮತ್ತಿಯ ಕಾಮದೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ನ ಆವರಣದಲ್ಲಿ ಆಯೋಜಿತ ‘ಕಥಾ ಸಮಯ. ಬನ್ನಿ ನಾವೊಂದು ಕಥೆ ಹೇಳೋಣ’ ಎಂಬ ಕಾರ್ಯಕ್ರಮವನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಉದ್ಘಾಟಿಸಲಿದ್ದಾರೆ. ಕೊಡಗು ಪತ್ರಿಕಾಭವನದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವಕಾಮತ್, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ, ಬಾರಿಯಂಡ ಜೋಯಪ್ಪ, ಅಸೀಮಾ ಮಾಸಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ, ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್, ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ರಾಮಚಂದ್ರ ಭಟ್, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಪತ್ರಕರ್ತರ ಸಂಘದ ವೀರಾಜಪೇಟೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಉಷಾ ಪ್ರೀತಂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ಪ್ರತೀ ಸ್ಪರ್ಧಿಗೆ ತಲಾ ೩ ನಿಮಿಷಗಳಂತೆ ಕಥೆ ಹೇಳಲು ಅವಕಾಶ ಇರಲಿದೆ.