ಮಡಿಕೇರಿ, ಆ.೧: ದಕ್ಷಿಣ ಅಮೇರಿಕಾದ ಗಯಾನ ದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮದೆನಾಡು ಗ್ರಾಮದ ನಿವಾಸಿ ಪಿ.ಬಿ.ಗಿರೀಶ್ ಅವರ ಮೃತದೇಹವನ್ನು ಭಾರತಕ್ಕೆ ತರಲಾಗುತ್ತಿದೆ. ಮೃತದೇಹವನ್ನು ಹೊತ್ತ ಕಾರ್ಗೋ ವಿಮಾನ ಗಯಾನದಿಂದ ಇಂದು ಹೊರಟಿದ್ದು, ತಾ.೭ರಂದು ಬೆಂಗಳೂರು ತಲುಪಲಿದೆ.
ದಕ್ಷಿಣ ಅಮೇರಿಕಾ ಖಂಡದ ಗಯಾನ ದೇಶದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ಎರಡು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಗಿರೀಶ್ ಅನಾರೋಗ್ಯದಿಂದಾಗಿ ಕಳೆದ ಜುಲೈ ೧೪ರಂದು ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಭಾರತಕ್ಕೆ ತರಲು ಮೃತರ ಕುಟುಂಬಸ್ಥರು ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಪ್ರಯತ್ನಿಸಿದ್ದು, ಇದೀಗ ಮೃತ ದೇಹವನ್ನು ಭಾರತಕ್ಕೆ ತರಲಾಗುತ್ತಿದೆ.
ಸರಕಾರದ ನೆರವು
ಮೃತದೇಹವನ್ನು ಭಾರತಕ್ಕೆ ತರಲು ಲಕ್ಷಾಂತರ ರೂಪಾಯಿ ವೆಚ್ಚವಾಗಲಿದ್ದು, ಸರಕಾರದ ಮೂಲಕ ಆರ್ಥಿಕ ನೆರವು ನೀಡುವಂತೆ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದರು. ಅಲ್ಲದೆ ರಾಜ್ಯದ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದರು. ಇದರೊಂದಿಗೆ ಗಿರೀಶ್ ವ್ಯಾಸಂಗ ಮಾಡಿದ್ದ ಬಸವನಹಳ್ಳಿ ಮೊರಾರ್ಜಿ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಸಕ ಪೊನ್ನಣ್ಣ ಅವರ ಮೂಲಕವೂ ಮನವಿ ಸಲ್ಲಿಸಿ ದ್ದರು. ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ ರೂ.೩.೬ ಲಕ್ಷ ಮಂಜೂರು ಮಾಡಿತ್ತು.
(ಮೊದಲ ಪುಟದಿಂದ)
ಸAಸದರ ಪ್ರಯತ್ನ
ಈ ನಡುವೆ ಗಿರೀಶ್ ಕುಟುಂಬಸ್ಥರು ಹಾಗೂ ಮೊಗೇರ ಸೇವಾ ಸಮಾಜದವರು ಸಂಸದ ಯದುವೀರ್ ಒಡೆಯರ್ ಅವರನ್ನು ಸಂಪರ್ಕಿಸಿ ಮೃತದೇಹವನ್ನು ಭಾರತಕ್ಕೆ ಕರೆತರಲು ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಸಂಸದರು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊAಡು ಸಹಕಾರ ನೀಡಿದ್ದಲ್ಲದೆ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ನೆರವಾಗಿದ್ದಾರೆ. ಮೃತದೇಹ ಭಾರತಕ್ಕೆ ಬರುತ್ತಿರುವ ಬಗ್ಗೆ, ಗಯಾನದಿಂದ ವಿಮಾನ ಹೊರಟಿರುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯಿಂದ ಸಂಸದರಿಗೆ ಅಧಿಕೃತವಾಗಿ ಇಮೇಲ್ ಸಂದೇಶ ಕೂಡ ಬಂದಿದೆ.
೧೫ ಯುಎಸ್ ಡಾಲರ್ ವೆಚ್ಚ
ಇತ್ತ ಮೃತದೇಹವನ್ನು ಭಾರತಕ್ಕೆ ತರಲು ೧೫,೬೩೫ ಯುಎಸ್ ಡಾಲರ್(ಭಾರತೀಯ ಕರೆನ್ಸಿ ರೂ. ೧೩,೬೪,೧೩೧.೮೬- ಹದಿಮೂರು ಲಕ್ಷದ ಅರವತ್ತ ನಾಲ್ಕು ಸಾವಿರದ ನೂರಮೂವತ್ತೊಂದು ರೂಪಾಯಿ ಎಂಭತ್ತಾರು ಪೈಸೆ) ವೆಚ್ಚವಾಗಿದೆ. ಈ ಪೈಕಿ ರಾಜ್ಯ ಸರಕಾರ ೩.೬೦ ಲಕ್ಷ ನೆರವು ನೀಡಿದ್ದರೆ ಇನ್ನುಳಿದ ಹಣವನ್ನು ಗಯಾನದ ಗಿರೀಶ್ ಕೆಲಸ ಮಾಡುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆ ಭರಿಸಿದೆ.
ಎಲ್ಲರೂ ಸಹಕಾರ ಮಾಡಿದ್ದಾರೆ
ತನ್ನ ಪತಿಯ ಮೃತದೇಹವನ್ನು ಸ್ವದೇಶಕ್ಕೆ ತರುವಲ್ಲಿ ಎಲ್ಲರೂ ಸಹಕಾರ ಮಾಡಿದ್ದಾರೆ. ಭಾರತೀಯ ರಾಯಭಾರ ಕಚೇರಿ, ಸಂಸದರು, ರಾಜ್ಯ ಸರಕಾರ, ಶಾಸಕರು ಹಾಗೂ ಮೊಗೇರ ಸೇವಾ ಸಮಾಜದ ಪ್ರಮುಖರು ಸಾಕಷ್ಟು ಸಹಕಾರ ನೀಡಿದ್ದಾರೆ. ಗಯಾನದ ಶೆರಿಫ್ ಆಸ್ಪತ್ರೆಯವರು ಕೂಡ ಎಲ್ಲಾ ರೀತಿಯ ನೆರವು ನೀಡಿದ್ದಾರೆ ಎಂದು ಮೃತ ಗಿರೀಶ್ ಅವರ ಪತ್ನಿ ಜಾನಕಿ ಹೇಳಿದರು.
ಸಂಸದರ ಸಹಕಾರ
ದೂರದ ಗಯಾನದಲ್ಲಿ ಮೃತಪಟ್ಟ ಗಿರೀಶ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಸಾಕಷ್ಟು ಸಮಸ್ಯೆ, ಕಾನೂನು ತೊಡಕುಗಳು ಎದುರಾಗಿದ್ದವು. ಈ ಸಂದರ್ಭದಲ್ಲಿ ಸಂಸದರಾದ ಯದುವೀರ್ ಒಡೆಯರ್ ಅವರಲ್ಲಿ ನೆರವು ಕೋರಿದ ನಂತರದಲ್ಲಿ ನಿರಂತರ ಸಂಪರ್ಕ ಇರಿಸಿಕೊಂಡಿದ್ದ ಸಂಸದರು ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯಿಂದ ಬಂದಿರುವ ಅಧಿಕೃತ ಮಾಹಿತಿಯನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಮೊಗೇರ ಸೇವಾ ಸಮಾಜದ ಗೌರವ ಸಲಹೆಗಾರ ಪಿ.ಎಂ. ರವಿ ತಿಳಿಸಿದ್ದಾರೆ.
ತಾ.೭ರಂದು ಬೆಂಗಳೂರಿಗೆ
ಗಿರೀಶ್ ಅವರ ಮೃತದೇಹವನ್ನು ಹೊತ್ತ ಕಾರ್ಗೊ ವಿಮಾನ ಇಂದು ಗಯಾನದಿಂದ ಹೊರಟಿದ್ದು, ತಾ.೭ರಂದು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪಲಿದೆ. ಅಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಕುಟುಂಬಸ್ಥರು ಬರಮಾಡಿಕೊಳ್ಳಲಿದ್ದು, ನಂತರ ಸ್ವಗ್ರಾಮ ಮದೆನಾಡಿಗೆ ಒಯ್ದು ಅಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. -ಸಂತೋಷ್