ಮಡಿಕೇರಿ, ಆ. ೧: ಮಡಿಕೇರಿ-ಮಂಗಳೂರು ಹೆದ್ದಾರಿ ನಡುವೆ ಭೂಕುಸಿತ ತಡೆಯುವ ನಿಟ್ಟಿನಲ್ಲಿ ನಿರ್ಮಿಸಿರುವ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ನಗರದಿಂದ ಅನತಿ ದೂರದಲ್ಲಿರುವ ಸ್ಥಳಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಗಿರೀಶ್, ಲೋಕೋಪಯೋಗಿ ಅಭಿಯಂತರ ಇಬ್ರಾಯಿಂ, ಗುತ್ತಿಗೆದಾರರಾದ ಶರೀನ್, ಜಗದೀಶ್ ರೈ ಅವರೊಂದಿಗೆ ಸ್ಥಳದಲ್ಲಿ ಚರ್ಚಿಸಿದ ಡಾ. ಮಂತರ್ ಗೌಡ ಅವರು, ತಜ್ಞರ ಸಲಹೆಯೊಂದಿಗೆ ಸ್ಥಳೀಯ ಭೌಗೋಳಿಕ ಅಂಶಕ್ಕೆ ಅನುಗುಣವಾಗಿ ವಿನ್ಯಾಸ ರೂಪಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನಾಹುತವಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು. ಸದ್ಯಕ್ಕೆ ಟಾರ್ಪಲ್ ಹಾಕಿ ಮಳೆ ನೀರು ಭೂಮಿ ಹಾಗೂ ಗೋಡೆಯೊಳಗೆ ಸೇರದಂತೆ ಕ್ರಮವಹಿಸಿ ಎಂದರು.
ಪುನರ್ವಸತಿ ಭರವಸೆ
ಈ ಭಾಗದಲ್ಲಿರುವ ೫ ಕುಟುಂಬಗಳಿಗೆ ಆದ್ಯತೆ ಮೇಲೆ ಜಂಬೂರಿನಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಮಂತರ್ ಗೌಡ ಭರವಸೆ ನೀಡಿದರು. ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿದ ಸಂದರ್ಭ ‘ಈಗಾಗಲೇ ನಮ್ಮ ಹೆಸರು ವಸತಿ ಪಟ್ಟಿಯಲ್ಲಿದೆ. ಆದರೆ ನೀಡಿಲ್ಲ’ ಎಂದು ನಿವಾಸಿಯೊಬ್ಬರು ತಿಳಿಸಿದ ಮೇರೆಗೆ ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮನೆ ಒದಗಿಸಲು ಮುಂದಾಗಲಾಗುವುದು. ಮಳೆ ನಿಲ್ಲುವ ತನಕ ಇಲ್ಲಿ ನೆಲಸದಂತೆ ಮನವಿ ಮಾಡಿದರು.
‘೩ ಹಂತದ ತಡೆಗೋಡೆಯ ಒಂದು ಕಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷö್ಯ ವಹಿಸದೆ ತುರ್ತು ಕಾಮಗಾರಿ ಕೈಗೊಳ್ಳಲಾಗುವುದು. ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಂತರ್ ಹೇಳಿದರು.
ಈ ಸಂದರ್ಭ ತಹಶೀಲ್ದಾರ್ ಶ್ರೀಧರ್, ನಗರಸಭೆ ಪೌರಾಯುಕ್ತ ರಮೇಶ್, ಕಾಂಗ್ರೆಸ್ ನಗರ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ಸದಾ ಮುದ್ದಪ್ಪ, ಮುದ್ದುರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.