ಚೆಟ್ಟಳ್ಳಿ, ಆ. ೧: ಕಾಫಿ ತೋಟ, ಮನೆಯ ಅಂಗಳಕ್ಕೆ ಲಗ್ಗೆಯಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆ ಇದೀಗ ಮನೆಯ ಮೇಲೆಯೇ ದಾಳಿಗೈದಿರುವುದು ಆತಂಕಕ್ಕೆ ಕಾರಣವಾಗಿದೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಕರೆಯ ನೆಲ್ಲಿಹಡ್ಲುವಿನ ಉತ್ತಪ್ಪ ಎಂಬವರ ಮನೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮನೆಯ ಮುಂಭಾಗ ಹಾನಿಯಾಗಿ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಮನೆಗಳು ಕಾಡಾನೆ ದಾಳಿಯಿಂದ ಹಾನಿಯಾಗಿವೆ.
ಕಾಡಾನೆ ಹಾವಳಿಯಿಂದ ಜನ ಹೈರಾಣಾಗಿದ್ದು, ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಉಪಟಳ ತಡೆಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.