ಸೋಮವಾರಪೇಟೆ, ಆ. ೧: ವಿದ್ಯುತ್ ಮಾರ್ಗ ದುರಸ್ತಿಪಡಿಸುವ ಸಂದರ್ಭ ಹೊಸದಾಗಿ ಅಳವಡಿಸಿದ ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿ ಮುರಿದು ಬಿದ್ದು, ಈರ್ವರು ಲೈನ್‌ಮನೆಗಳು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಇಂದು ಸಂಜೆ ನಡೆದಿದೆ.
ಹಾನಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ದುದ್ದುಗಲ್ಲು ಬಳಿಯಲ್ಲಿ ವಿದ್ಯುತ್ ಮಾರ್ಗ ದುರಸ್ತಿ ಕೆಲಸ ಮಾಡುವ ಸಂದರ್ಭ ದುರ್ಘಟನೆ ನಡೆದಿದೆ. ನೂತನ ಕಂಬ ಅಳವಡಿಸಿ ವಯರ್‌ಗಳನ್ನು ಹಾಕುವ ಕೆಲಸದಲ್ಲಿ ನಿರತರಾಗಿದ್ದ ಲೈನ್‌ಮೆನ್ ಜಾದವ್ ಹಾಗೂ ದಿನೇಶ್ ಅವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಾದವ್ ಅವರು ಕಂಬದ ಮೇಲ್ಭಾಗಕ್ಕೆ ಹತ್ತಿದ್ದು, ಅರ್ಧಕ್ಕಿಂತ ಮೇಲ್ಬಾಗಕ್ಕೆ ಹತ್ತಿದ್ದ ದಿನೇಶ್ ಅವರು ವಿದ್ಯುತ್ ತಂತಿಯನ್ನು ನೀಡುವ ಸಂದರ್ಭ, ಕಂಬ ಅರ್ಧಕ್ಕೆ ತುಂಡಾಗಿದೆ. ಪರಿಣಾಮ ಜಾದವ್ ಹಾಗೂ ದಿನೇಶ್ ಅವರುಗಳು ಆಯತಪ್ಪಿ ಕೆಳಬಿದ್ದಿದ್ದಾರೆ. ಘಟನೆಯಿಂದ ಜಾದವ್ ಅವರ ಸೊಂಟದ ಭಾಗಕ್ಕೆ ಅಲ್ಪ ಪೆಟ್ಟಾಗಿದ್ದರೆ, ದಿನೇಶ್ ಅವರ ಕಾಲಿಗೆ ಗಾಯವಾಗಿದೆ. ತಕ್ಷಣ ಸ್ಥಳೀಯರು ಈರ್ವರನ್ನೂ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಈರ್ವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.