ಮಡಿಕೇರಿ, ಜು. ೩೧: ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷದಿಂದ ರೈತರ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದ ರೈತ ವಿದ್ಯಾನಿಧಿ ಸ್ಥಗಿತಗೊಂಡಿದೆ. ಬಿಜೆಪಿ ಸರ್ಕಾರ ನೀಡುತ್ತಿದ್ದ ಮಾಸಿಕ ರೂ. ೪ ಸಾವಿರ ಕಿಸಾನ್ ಸಮ್ಮಾನ್ ನಿಧಿಯೂ ಸ್ಥಗಿತಗೊಂಡಿದೆ. ರೈತರ ಕೃಷಿ ಪಂಪ್ ಸೆಟ್ ಟ್ರಾನ್ಸ್ಫಾರ್ಮರ್ ಅಳವಡಿಕೆಗೆ ಬಿಜೆಪಿ ಸರ್ಕಾರ ೨೫,೦೦೦ ನಿಗದಿಪಡಿಸಿತ್ತು, ಆದರೆ ಇಂದಿನ ಸರಕಾರ ರೂ. ೩ ಲಕ್ಷಕ್ಕೆ ಹೆಚ್ಚಿಸಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ರೈತರಿಗೆ ನೀಡುವ ರಸಗೊಬ್ಬರ ಕೇಂದ್ರ ಸರ್ಕಾರ ಹೆಚ್ಚಿಗೆ ನೀಡಿದ್ದರೂ ಕೂಡ ರೈತರಿಗೆ ನೀಡದೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಜೊತೆಗೆ ಬರಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ್ದ ೩,೪೫೪ ಕೋಟಿ ರೂಪಾಯಿಯಲ್ಲಿ ನಯಾ ಪೈಸೆ ರಾಜ್ಯದ ರೈತರ ಕೈ ಸೇರಿಲ್ಲ. ಭೂಸಿರಿ ಯೋಜನೆಯಡಿಯಲ್ಲಿ ನೀಡುವ ಪ್ರೋತ್ಸಾಹ ಧನವೂ ಸಿಗುತ್ತಿಲ್ಲ. ವನ್ಯಜೀವಿ ಹಾವಳಿ ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಅತಿವೃಷ್ಟಿಯಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳು ನಾಶವಾಗಿದ್ದು, ಸಂಬAಧಪಟ್ಟ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿ ಆದಷ್ಟು ಬೇಗ ಸರ್ವೆ ಕಾರ್ಯ ನಡೆಸಿ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಅವರು, ತಪ್ಪುಗಳು ಸರಿಯಾಗದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.