*ಗೋಣಿಕೊಪ್ಪ, ಆ. ೨: ಪೊನ್ನಂಪೇಟೆ ತಾಲೂಕಿನ ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಜಿಲ್ಲಾ ಕೃಷಿ ಇಲಾಖೆ ಜಾರಿದಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿತು.

ಗೋಣಿಕೊಪ್ಪ ವ್ಯಾಪ್ತಿಯ ಗೊಬ್ಬರ ಗೋದಾಮುಗಳಿಗೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುದೋಳ್, ಉಪ ನಿರೀಕ್ಷಕ ಪ್ರದೀಪ್ ಕುಮಾರ್, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿದಳ ಅಧಿಕಾರಿ ಕಾಂತರಾಜ್ ಭೇಟಿ ನೀಡಿ ಯೂರಿಯ ಗೊಬ್ಬರದ ಅವ್ಯವಹಾರ, ಕಾಳಸಂತೆ ಮಾರಾಟ, ಕೃತಕ ಅಭಾವ ಸೃಷ್ಟಿ, ನೋ ಸ್ಟಾಕ್ ಬೋರ್ಡ್ಗಳಿಂದ ರೈತರಿಗೆ ಆಗುವ ಅನ್ಯಾಯಗಳ ಬಗ್ಗೆ ಪರಿಶೀಲಿಸಿ ಮಾರಾಟ ಮತ್ತು ದಾಖಲಾತಿಗಳ ಮಾಹಿತಿ ಪಡೆದುಕೊಂಡರು.

ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಔಷಧ ಮತ್ತು ಗೊಬ್ಬರದ ದರಪಟ್ಟಿ, ಗುಣಮಟ್ಟದ ನಾಮಫಲಕಗಳನ್ನು ಅಳವಡಿಸುವಂತೆ ಗೊಬ್ಬರಗಳಿಗೆ ಮತ್ತು ಔಷಧಗಳಿಗೆ ಬಿಲ್‌ಗಳನ್ನು ನೀಡುವಂತೆ ಸಂಬAಧಿಸಿದವರಿಗೆ ಸೂಚಿಸ ಲಾಯಿತು.

ಗೋಣಿಕೊಪ್ಪ ಎ.ಪಿ.ಸಿ.ಎಂ.ಸಿ, ಟಾಟಾ ಕಾಫಿ ಗೋದಾಮು, ಕೃಷಿ ಪತ್ತಿನ ಸಹಕಾರ ಸಂಘ ಮತ್ತು ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ, ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘ, ಟಿ. ಶೆಟ್ಟಿಗೇರಿ ಕೃಷಿಪತ್ತಿನ ಸಹಕಾರ ಸಂಘ ಸೇರಿದಂತೆ ತಾಲೂಕಿನಾದ್ಯಂತ ಇರುವ ಗೊಬ್ಬರ ಗೋದಾಮುಗಳನ್ನು ಪರಿಶೀಲಿಸ ಲಾಯಿತು.

ಗೋಣಿಕೊಪ್ಪ ವ್ಯಾಪ್ತಿ ಪರಿಶೀಲನೆ ಸಂದರ್ಭ ಎ.ಎಸ್.ಐ ದೇವರಾಜು, ಸಿಬ್ಬಂದಿ ತನು, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿದಳ ಅಧಿಕಾರಿಗಳ ಚಾಲಕ ಹಾಶೀರ್ ಇದ್ದರು.