ಚೆಯ್ಯಂಡಾಣೆ, ಆ. ೨: ನರಿಯಂದಡ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ನರಿಯಂದಡ, ಚೇಲಾವರ ಕೋಕೇರಿ, ಕರಡ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೃಷಿ ಫಸಲುಗಳನ್ನು ಹಾನಿಗೊಳಿಸಿದ್ದ ಕಾಡಾನೆ ಹಿಂಡುಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಿನ್ನೆ ಹಾಗೂ ಇಂದು ಶನಿವಾರ ನಡೆಯಿತು.
ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ನಿನ್ನೆ ನಡೆದ ಕಾರ್ಯಾಚರಣೆ ವೇಳೆ ಮರಿಯಾನೆಗಳು ಸೇರಿದಂತೆ ೧೦ ಕ್ಕೂ ಅಧಿಕ ಕಾಡಾನೆಗಳ ಗುಂಪು ಬೇರ್ಪಟ್ಟು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸಿತು. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಮೀಪದ ಬಿದ್ದಂಡತಟ್ಟು ಕಾಡಿಗೆ ಹಾಗೂ ಪದಿನಾಲ್ಕುನಾಡು ಕೆರಟಿ ಕಾಡಿಗೆ ಕಾಡಾನೆಗಳನ್ನು ಓಡಿಸಿದರು.
ಇಂದು ನಡೆದ ಕಾರ್ಯಾ ಚರಣೆಯಲ್ಲಿ ಅರಣ್ಯ ಇಲಾಖೆಯ ವರು ೨ ಗುಂಪುಗಳಾಗಿ ಕಾರ್ಯಾಚರಣೆ ಕೈಗೊಂಡು ಅರಣ್ಯಾಧಿಕಾರಿಗಳ ಒಂದು ಗುಂಪು ತೋಟದಲ್ಲಿ ಬೀಡುಬಿಟ್ಟಿದ್ದ ೮ ಕಾಡಾನೆಗಳನ್ನು ಕೋಚನಕಾಡು, ಚೇಲಾವರ ಮೂಲಕ ಮಲೆತಿರಿಕೆ ಬೆಟ್ಟಕ್ಕೆ ಓಡಿಸಿತು.
ಅರಣ್ಯ ಇಲಾಖೆಯ ಮತ್ತೊಂದು ಗುಂಪು ೩ ಆನೆ ಹಾಗೂ ೧ ಮರಿಯಾನೆಯನ್ನು ಕೋಚನಕಾಡು, ಚೇಲಾವರ, ಮರಂದೋಡ ಮೂಲಕ ಕೆರೆತಟ್ಟು ಬೆಟ್ಟಕ್ಕೆ ಓಡಿಸಲಾಯಿತು.
ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಡಿಆರ್ಎಫ್ಒ ಶ್ರೀನಿವಾಸ್, ಇಟಿಎಫ್ ಡಿಆರ್ಎಫ್ಒ ದೇವ ರಾಜ್, ಇಟಿಎಫ್ ತಂಡ, ಆರ್ಆರ್ಟಿ ತಂಡಗಳು, ಕ್ಯಾಂಪ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.