ಕುಶಾಲನಗರ, ಆ. ೨: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಒಟ್ಟು ೧೪ ಆನೆಗಳು ಪಾಲ್ಗೊಳ್ಳಲಿದ್ದು, ಇದರಲ್ಲಿ ದುಬಾರೆ ಆನೆ ಶಿಬಿರದ ಎಂಟು ಆನೆಗಳು ಕೂಡ ದಸರಾದಲ್ಲಿ ಪಾಲ್ಗೊಳ್ಳಲು ಸಿದ್ಧಗೊಂಡಿವೆ.
ಗಜನಾಯಕ ಅಭಿಮನ್ಯು ನೇತೃತ್ವದಲ್ಲಿ ಇಂದು ಹುಣಸೂರು ಬಳಿಯ ವೀರನ ಹೊಸಹಳ್ಳಿಯಿಂದ ತೆರಳಲು ಮೊದಲ ಹಂತದ ಆನೆಗಳು ಪಯಣಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ಧನಂಜಯ, ಕಂಜನ್, ಪ್ರಶಾಂತ
(ಮೊದಲ ಪುಟದಿಂದ) ಮತ್ತು ಕಾವೇರಿ ಆನೆಗಳು ಅವುಗಳ ಮಾವುತ ಕಾವಾಡಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಭಾನುವಾರ ಬೆಳಿಗ್ಗೆ ದುಬಾರೆಯಿಂದ ಲಾರಿ ಮೂಲಕ ವೀರನಹೊಸಹಳ್ಳಿಗೆ ಸಾಗಲಿವೆ.
ಧನಂಜಯ ಕಳೆದ ಏಳು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಕಂಜನ್ ಇದೀಗ ಮೂರನೇ ಬಾರಿಯ ದಸರಾ ಮಹೋತ್ಸವಕ್ಕೆ ತೆರಳುತ್ತಿದ್ದಾನೆ.
ಪ್ರಶಾಂತ ಕಳೆದ ೧೫ ವರ್ಷಗಳಿಂದ ದಸರಾದಲ್ಲಿ ಮಿಂಚುತ್ತಿದ್ದು, ಶಿಬಿರದ ಕಾವೇರಿ ಆನೆ ದಸರಾದಲ್ಲಿ ಅನೇಕ ಬಾರಿ ಪಾಲ್ಗೊಂಡಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಹಂತದ ಪ್ರಯಾಣದಲ್ಲಿ ಸುಗ್ರೀವ, ಗೋಪಿ, ಹರ್ಷ ಮತ್ತು ಹೇಮಾವತಿ ತೆರಳಲು ಸಿದ್ಧರಾಗುತ್ತಿದ್ದಾರೆ.
-ಚಂದ್ರಮೋಹನ್