ಸುಂಟಿಕೊಪ್ಪ, ಆ. ೩: ಸುಂಟಿ ಕೊಪ್ಪ ಹೋಬಳಿಯ ಗದ್ದೆಹಳ್ಳದಲ್ಲಿ ‘ಗದ್ದೆ ಆಟ’ ಎಂಬ ವಿನೂತನ ಕಾರ್ಯಕ್ರಮದ ರೈತರ ಕುಟುಂಬದಲ್ಲಿ ಮಂದಹಾಸ ಮೂಡಿಸಿತು.

ಕೆಸರು ಗದ್ದೆಯಲ್ಲಿ ೩ ವರ್ಷದಿಂದ ೬೦ ವರ್ಷ ಮೇಲ್ಪಟ್ಟವರಿಗೂ ಮುಕ್ತ ಕೆಸರು ಗದ್ದೆ ಓಟದಲ್ಲಿ ಈ ಭಾಗದ ರೈತ, ಕೂಲಿ ಕಾರ್ಮಿಕರ ಮಕ್ಕಳು ಕುಟುಂಬಸ್ಥರು ಭಾಗವಹಿಸಿ ಕಕ್ಕಡ ಆಟಿ ಸಂಭ್ರಮಕ್ಕೆ ಮುನ್ನುಡಿಯಿಟ್ಟರು.

ಹಿರಿಯ ರಾಜಕಾರಣಿ ಸಮಾಜ ಸೇವಕರಾದ ಯಂಕನ. ವೈ. ಕರುಂಬಯ್ಯ ಅವರ ಗದ್ದೆಯಲ್ಲಿ ಇದೇ ಪ್ರಥಮ ಬಾರಿಗೆ ಸಮಾಜಮುಖಿ ಸಹೃದಯಿ ಬಾಂಧವರು ಚಿಂತನ ಮಂಥನ ನಡೆಸಿ ಕೆಸರು ಗದ್ದೆಯಲ್ಲಿ ಪರುಷ, ಮಹಿಳೆಯರಿಗೆ ಕೆಸರು ಗದ್ದೆ ಓಟ, ರಿಲೇ, ಹಗ್ಗ ಜಗ್ಗಾಟ, ಮಳೆಯ ಸಿಂಚನ ಕಡಿಮೆಯಾಗಿದ್ದರಿಂದ ಪ್ರೇಕ್ಷಕರ ಸಂಖ್ಯೆಯು ಹೆಚ್ಚಾಗಿತ್ತು.

ಫನ್‌ಗೇಮ್ಸ್ ಎಂಬ ಸ್ಪರ್ಧೆಯಲ್ಲಿ ದಂಪತಿ ಭಾಗವಹಿಸಿ ನೆರೆದಿದ್ದವರಿಗೆ ರಸದೌತಣ ನೀಡಿದರು. ಒಂದೇ ಕುಟುಂಬದ ತಾಯಿ ತಂದೆ ಮಗ ಮಗಳು ಒಗ್ಗೂಡಿ ಸೇರಿ ತಿರುಗಿ ಓಟ ಎಂಬ ಸ್ಪರ್ಧೆ ಕುತೂಹಲ ಮೂಡಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವೈ.ಎಂ. ಕರುಂಬಯ್ಯ ಅವರು ರೈತರೇ ದೇಶದ ಬೆನ್ನೆಲುಬು ರೈತಾಪಿ ವರ್ಗದಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅವರು ಭತ್ತದ ಗದ್ದೆಯನ್ನು ಪಾಳು ಬಿಡದಂತೆ ಸಲಹೆಯಿತ್ತರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ರೈತರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿದ್ದು ಶ್ಲಾಘನೀಯವಾದುದು. ಇದರಿಂದ ಕೃಷಿಕರಿಗೆ ಹೆಚ್ಚಿನ ಉತ್ತೇಜನ ದೊರಕಿದಂತಾಗಿದೆ ಎಂದು ಹೇಳಿದರು.