ಕುಶಾಲನಗರ, ಆ. ೩: ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ದುಬಾರೆ ಆನೆ ಶಿಬಿರದಿಂದ ಭಾನುವಾರ ಪ್ರಥಮ ತಂಡದ ನಾಲ್ಕು ಆನೆಗಳನ್ನು ಹುಣಸೂರು ಬಳಿಯ ವೀರನ ಹೊಸಹಳ್ಳಿ ಶಿಬಿರಕ್ಕೆ ಲಾರಿಗಳ ಮೂಲಕ ಸಾಗಿಸಲಾಯಿತು.
ದುಬಾರೆ ಶಿಬಿರದ ಧನಂಜಯ, ಕಂಜನ್, ಪ್ರಶಾಂತ ಮತ್ತು ಕಾವೇರಿ ಆನೆಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಳುಹಿಸಿಕೊಡಲಾಯಿತು.
ಧನಂಜಯ ಆನೆ ೪೫ ವರ್ಷ ಪ್ರಾಯದ ಆನೆಯಾಗಿದ್ದು ಕಳೆದ ೭ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ೨೦೨೩ ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯದಿಂದ ಸೆರೆಹಿಡಿದ ಆನೆ ಇದಾಗಿದ್ದು ಮಾವುತ ಜೆ ಸಿ ಭಾಸ್ಕರ, ಕಾವಾಡಿ ಜೆ.ಎಸ್. ರಾಜಣ್ಣ ಜೊತೆಗೆ ತೆರಳಿದ್ದಾರೆ.
ಕಂಜನ್ ೨೬ ವರ್ಷದ ಆನೆಯಾಗಿದ್ದು ಇದೀಗ ಮೂರನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರೆ, ಇದನ್ನು ಕೂಡ ಹಾಸನ ಜಿಲ್ಲೆಯ ಯಸಳೂರು ಬಳಿ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು.
ಮಾವುತ ಜೆ.ಡಿ. ವಿಜಯ ಮತ್ತು ಕಾವಾಡಿ ಕಿರಣ್ ಈ ಆನೆ ಜೊತೆ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಶಾಂತ ೫೩ ವರ್ಷದ ಆನೆಯಾಗಿದ್ದು ಕಳೆದ ೧೫ ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದಾನೆ. ೧೯೯೩ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದ ಆನೆಯನ್ನು ಮಾವುತ ಜೆ. ಚಿನ್ನಪ್ಪ, ಕಾವಾಡಿ ಚಂದ್ರ ನಿರ್ವಹಣೆ ಮಾಡುತ್ತಿದ್ದಾರೆ.
ಕಾವೇರಿ ೪೫ ವರ್ಷ ಪ್ರಾಯದ ಆನೆಯಾಗಿದ್ದು ಹಲವು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ಮಾವುತ ಜೆ ಡಿ ದೋಬಿ ಮತ್ತು ಕಾವಾಡಿ ಜೆ.ಎ. ಸಂಜನ್ ಈ ಆನೆ ಜೊತೆ ತೆರಳಿದ್ದಾರೆ.
ಈ ಸಂದರ್ಭ ಅರಣ್ಯ ಇಲಾಖೆ ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್, ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕನ್ನಂಡ ರಂಜನ್, ಧರ್ಮೇಂದ್ರ ಮತ್ತು ಪಶು ತಜ್ಞ ವೈದ್ಯರಾದ ಡಾ. ಚಿಟ್ಯಪ್ಪ ಮತ್ತಿತರರು ಇದ್ದರು.
ಸೋಮವಾರ ಬೆಳಿಗ್ಗೆ ವೀರನಹೊಸಹಳ್ಳಿಯಿಂದ ಮೈಸೂರು ಕಡೆಗೆ ಮೊದಲ ಹಂತದ ಆನೆಗಳ ಪಯಣ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ.
ತಿತಿಮತಿ ಮತ್ತಿಗೋಡು
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ತಿತಿಮತಿ ಮತ್ತಿಗೋಡು ಕಂಠಪುರ ಆನೆ ಶಿಬಿರದಿಂದ ಎರಡು ಆನೆಗಳಿಗೆ ಭಾನುವಾರ ಬೀಳ್ಕೊಡಲಾಯಿತು.
ಹುಣಸೂರು ಬಳಿಯ ವೀರನ ಹೊಸಹಳ್ಳಿಯಿಂದ ಮೈಸೂರಿಗೆ ತೆರಳಲು ಮೊದಲ ಹಂತದಲ್ಲಿ ಕಂಠಪುರದ ಭೀಮ ಮತ್ತು ಅಭಿಮನ್ಯು ತನ್ನ ಪಾಲಕರೊಂದಿಗೆ ಹೊರಟಿವೆ. ಅರಣ್ಯ ಅಧಿಕಾರಿಗಳು ಆನೆಗಳನ್ನು ಸಿಂಗರಿಸಿ, ರಾಜಾತೀಥ್ಯ ನೀಡಿ ಕಳುಹಿಸಿಕೊಟ್ಟರು.
ಭೀಮಾ ಮತ್ತು ಅಭಿಮನ್ಯು ಕಳೆದ ಏಳು ವರ್ಷಗಳಿಂದ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿವೆ ಎಂದು ಅರಣ್ಯ ಅಧಿಕಾರಿ ದೇವರಾಜ್ ಮಾಹಿತಿ ನೀಡಿದ್ದಾರೆ. ಭೀಮನ ಪಾಲಕರುಗಳಾದ, ಮಾವುತ ಗುಂಡು, ಕಾವಾಡಿ ನಂಜುಡಸ್ವಾಮಿ, ಅಭಿಮನ್ಯುವಿನ ಪಾಲಕರುಗಾಳಾದ ಮಾವುತ ವಸಂತ, ಕಾವಾಡಿ ರಾಜು ಆನೆಗಳ ಜೊತೆ ತೆರೆಳಿದರು.
ಮತ್ತಿಗೋಡು ವಲಯ ಅರಣ್ಯಾಧಿಕಾರಿ ದೇವರಾಜ್, ವೈದ್ಯಾಧಿಕಾರಿ ಡಾ. ರಮೇಶ್, ಮತ್ತು ಇಲಾಖೆ ಸಿಬ್ಬಂದಿಗಳು ಇದ್ದರು.
-ಚಂದ್ರಮೋಹನ್, ಎನ್.ಎನ್. ದಿನೇಶ್