ಗೋಣಿಕೊಪ್ಪಲು, ಆ.೪: ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾಗಿರುವ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಕಾಳ ಸಂತೆಗೆ ಸಾಗಾಟ ಮಾಡುತ್ತಿದ್ದ ವೇಳೆ ರೆವಿನ್ಯೂ ಅಧಿಕಾರಿಗಳಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆ ದಾಳಿ ನಡೆಸಿ ಮಾಲುಸಹಿತ ಆರೋಪಿ ಗೋಣಿಕೊಪ್ಪ ನಗರದ ಬಿ.ವಿಠಲ ಎಂಬಾತ ಸಿಕ್ಕಿ ಬಿದ್ದಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯಿಂದ ೭೭೯ ಕೆಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಕಾರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಪೊನ್ನಂಪೇಟೆ ತಾಲೂಕಿನ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ನಿಶಾನ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕರು ಅಧಿಕಾರಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡುವ ಮೂಲಕ ಗೋಣಿಕೊಪ್ಪದಿಂದ ಹುಣಸೂರು ಕಡೆಗೆ ತನ್ನ ಕಾರಿನಲ್ಲಿ ಅಕ್ರಮವಾಗಿ ಅಕ್ಕಿಯನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಸಂಗ್ರಹಿಸಿದ ಪೊನ್ನಂಪೇಟೆ ಆಹಾರ ಇಲಾಖೆಯ ಅಧಿಕಾರಿಗಳು ತಮ್ಮ ವಾಹನದಲ್ಲಿ ತೆರಳಿ, ಅಕ್ಕಿ ಸಾಗಾಟ ಮಾಡುತ್ತಿದ್ದ ಕಾರನ್ನು ರಾಜ್ಯ ಹೆದ್ದಾರಿಯಲ್ಲಿ ಬೆನ್ನಟ್ಟುವ ಮೂಲಕ ಚೆನ್ನಂಗೊಲ್ಲಿ ಸಮೀಪ ಅಕ್ಕಿ ಸಾಗಿಸುತ್ತಿದ್ದ ಕಾರನ್ನು ನಿಲ್ಲಿಸಿ ಕಾರಿನ ಚಾಲಕ ವಿಠಲ್‌ನನ್ನು ವಿಚಾರಣೆಗೊಳಪಡಿಸಿದ ವೇಳೆ ಬಡವರಿಗಾಗಿ ವಿತರಿಸುವ ಪಡಿತರ ಅಕ್ಕಿಯ ಕಳ್ಳ ಸಾಗಾಟ ಬೆಳಕಿಗೆ ಬಂದಿದೆ.

ಆರೋಪಿ ವಿಠಲನನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ ವೇಳೆ ಗೋಣಿಕೊಪ್ಪಲುವಿನಲ್ಲಿ ಬಡವರಿಂದ ಸಂಗ್ರಹಿಸಿದ್ದ ೭ ಕ್ವಿಂಟಾಲ್‌ಗೂ ಅಧಿಕ ಅಕ್ಕಿಯನ್ನು ಹುಣಸೂರಿಗೆ ಸಾಗಿಸುತ್ತಿರುವುದಾಗಿ ಅಧಿಕಾರಿಗಳ

(ಮೊದಲ ಪುಟದಿಂದ) ಮುಂದೆ ಹೇಳಿಕೊಂಡಿದ್ದಾನೆ. ಅಕ್ಕಿಯನ್ನು ತನ್ನ ಕಾರಿನಲ್ಲಿ ಸಾಗಾಟ ಮಾಡುವ ವೇಳೆ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅಕ್ಕಿ ಚೀಲದ ಮೇಲೆ ಬಾಳೆಯ ಗೊನೆಗಳು ಹಾಗೂ ಕೆಲವು ಗುಜರಿ ಸಾಮಾನುಗಳನ್ನು ಜೋಡಿಸಿಟ್ಟು ಹುಣಸೂರು ಕಡೆಗೆ ತನ್ನ ಕಾರಿನಲ್ಲಿ ತೆರಳುತ್ತಿದ್ದ.

ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಪೊನ್ನಂಪೇಟೆ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿಠಲನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಕ್ಕಿ ಸಾಗಾಟ ಮಾಡುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಪೊಲೀಸ್ ವಶದಲ್ಲಿದ್ದು ತನಿಖೆ ಮುಂದುವರೆದಿದೆ. ಕಾರ್ಯಾಚರಣೆ ವೇಳೆ ಕಂದಾಯ ಇಲಾಖೆಯ ಸಿಬ್ಬಂದಿ ಸುನೀಲ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.