ವೀರನಹೊಸಹಳ್ಳಿ, ಆ. ೪: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಈ ಬಾರಿ ಪಾಲ್ಗೊಳ್ಳಲಿರುವ ಒಟ್ಟು ೧೪ ಆನೆಗಳ ಪೈಕಿ ಕೊಡಗಿನ ೬ ಆನೆಗಳು ಸೇರಿದಂತೆ ಮೊದಲ ಹಂತದಲ್ಲಿ ಒಟ್ಟು ೯ ಆನೆಗಳು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಮವಾರದಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಂಬೂಸವಾರಿಯ ಕ್ಯಾಪ್ಟನ್ ಕೊಡಗಿನ ಮತ್ತಿಗೂಡು ಶಿಬಿರದ ಅಭಿಮನ್ಯು ಸೇರಿದಂತೆ ೯ ಆನೆಗಳಿಗೆ ಪುರೋಹಿತರಾದ ಮೈಸೂರಿನ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ದಸರಾ ಗಜಪಯಣ ಆರಂಭಗೊAಡಿತು. ಇದಕ್ಕೂ ಮೊದಲು ವಿಶೇಷವಾಗಿ ಅಲಂಕೃತಗೊAಡಿದ್ದ ಆನೆಗಳನ್ನು ಸಾಲಾಗಿ ನಿಲ್ಲಿಸಿ ಆನೆಗಳ ಪಾದ ತೊಳೆದು, ದೃಷ್ಟಿ ತೆಗೆಯಲಾಯಿತು. ನಂತರ ಆನೆಗಳ ಪಾದದ ಬಳಿ ಕುಂಕುಮ, ಅರಿಸಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ಆನೆಗಳಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ, ಪಶು ಸಂಗೋಪನೆ ಇಲಾಖೆಯ ಸಚಿವರಾದ ಕೆ. ವೆಂಕಟೇಶ್, ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಶೇಟ್, ಹುಣಸೂರು ಶಾಸಕರಾದ ಜಿ. ಡಿ. ಹರೀಶ್ ಗೌಡ, ಕೆ.ಆರ್. ನಗರ ಶಾಸಕರಾದ ರವಿಶಂಕರ್, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಆಯುಬ್ ಖಾನ್, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯಾಹ್ನ ೧೨.೫೦ ಗಂಟೆಗೆ ದೀಪ ಬೆಳಗಿ ಪುಷ್ಪಾರ್ಚನೆ ನೆರವೇರಿಸಿ ಮಾವುತರು ಮತ್ತು ಕಾವಾಡಿಗರನ್ನು ಸತ್ಕರಿಸುವುದರ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಜಿಲ್ಲಾಡಳಿತದಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೆ ವೇಳೆ ಆನೆಗಳಿಗೆ ಕಬ್ಬು, ಬೆಲ್ಲವನ್ನು ನೀಡಲಾಯಿತು.

ಪೂಜೆ ಬಳಿಕ ಗಜಪಡೆ ವೀರನಹೊಸಳ್ಳಿಯ ವಲಯ ಕಚೇರಿ ಬಳಿಯಿಂದ ವೀರನಹೊಸಳ್ಳಿ ಆಶ್ರಮ ಶಾಲೆವರೆಗೆ ಒಂದು ಕಿ.ಮೀ.ದೂರ ಕಾಲ್ನಡಿಗೆ ಮೂಲಕ ಸಾಗಿ ಬಂತು. ಈ ವೇಳೆ ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಹಾಡಿಗಳ ನೂರಾರು ಮಹಿಳೆಯರು ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು. ಜೊತೆಗೆ ಚಂಡೆ, ನಗಾರಿ, ವೀರಗಾಸೆ, ಕಂಸಾಳೆ, ಕೋಲಾಟ, ಪೂಜಾಕುಣಿತ, ಚಂಡೆ ಮೇಳ, ಗಾರುಡಿ ಗೊಂಬೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾವಿದರ ತಂಡಗಳು ಗಜಪಡೆಯ ಮೆರವಣಿಗೆಗೆ ಮೆರಗು ನೀಡಿದವು.

ನಾಗರಹೊಳೆಯ ಅಭಯಾರಣ್ಯ ವ್ಯಾಪ್ತಿಯ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿರುವ ಅಂಬಾರಿ ಆನೆ ಅಭಿಮನ್ಯು, ಭೀಮ, ದುಬಾರೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ್, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ ಹಾಗೂ ಬಳ್ಳೆ ಶಿಬಿರದ ಲಕ್ಷಿö್ಮÃ ಎಂಬ ೯ ಆನೆಗಳು ಮೊದಲ ಹಂತದಲ್ಲಿ ಇಂದು ಮೈಸೂರಿಗೆ ಪ್ರಯಾಣ ಬೆಳೆದವು.

ಮೈಸೂರು ಜಿಲ್ಲಾಧಿಕಾರಿ ಲಕ್ಷಿö್ಮಕಾಂತ್ ರೆಡ್ಡಿ, ಐಜಿಪಿ ಡಾ. ಎಂ. ಬಿ. ಬೋರಲಿಂಗಯ್ಯ, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಸೇರಿದಂತೆ ಅರಣ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. -ರಫೀಕ್ ತೂಚಮಕೇರಿ