ಸೋಮವಾರಪೇಟೆ, ಆ. ೫: ತಾಲೂಕು ಆಹಾರ ಇಲಾಖೆ ವತಿಯಿಂದ ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯ ಹೊಟೇಲ್ ಮತ್ತು ಬೇಕರಿಗಳಿಗೆ ಭೇಟಿ ನೀಡಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಕೊಡ್ಲಿಪೇಟೆ ಪಟ್ಟಣದಲ್ಲಿರುವ ಎಲ್ಲಾ ಹೊಟೇಲ್ ಮತ್ತು ಬೇಕರಿ ಹಾಗೂ ಕೋಳಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸೋಮವಾರಪೇಟೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ಅವರು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸಬಾರದು. ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಮಾತ್ರ ಬಳಸುವಂತೆ ಎಚ್ಚರಿಕೆ ನೀಡಿ ಸ್ವಚ್ಛತೆ ಕುರಿತು ಗಮನಹರಿಸುವಂತೆ ತಾಕೀತು ಮಾಡಿದರು,
ವಾಣಿಜ್ಯ ವಹಿವಾಟು ನಡೆಸುವವರು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳನ್ನು ಮಾತ್ರ ಬಳಸಬೇಕೆಂಬ ನಿಯಮವಿದ್ದು ಅನಧಿಕೃತವಾಗಿ ಗೃಹ ಬಳಕೆಯ ಸಿಲಿಂಡರ್ಗಳನ್ನು ಬಳಸಿದರೆ ಸಿಲಿಂಡರ್ಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಿ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕಡೆಗಳಲ್ಲಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭ ತಾಲೂಕು ಆಹಾರ ಇಲಾಖೆ ಸಿಬ್ಬಂದಿ ವಿನೋದ್ ಇದ್ದರು