ಕೂಡಿಗೆ, ಆ. ೬: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚೇತನ್ ಅವರಿಗೆ ಗೌರವ ಸಮರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಹಳ್ಳಿಮನೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕೊಡಗು ಜಿಲ್ಲೆಯ ಒಬ್ಬ ಶಿಕ್ಷಕನಿಗೆ ರಾಜ್ಯಮಟ್ಟದ ಹುದ್ದೆ ದೊರಕಿರುವುದು ಸಂತೋಷ ತಂದಿದೆ. ಶಿಕ್ಷಕ ಚೇತನ್, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗಳ ಧ್ವನಿಯಾಗಿ ಸರ್ಕಾರ ಹಾಗೂ ಶಿಕ್ಷಕರ ನಡುವಿನ ಸೇತುವೆಯಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಕೊಡಗು ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಕೊಡಗು ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿದರು.

ನೂತನ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚೇತನ್ ಮಾತನಾಡಿ, ಸುಮಾರು ೫೫ ವರ್ಷಗಳ ಇತಿಹಾಸ ಹೊಂದಿರುವ ಶಿಕ್ಷಕರ ಸಂಘದ ಕಾರ್ಯದರ್ಶಿ ಆಗಿ ನೇಮಕವಾಗಿರುವುದು ತುಂಬ ಸಂತಸ ತಂದಿದೆ. ನಮ್ಮ ಸಂಘ ಒಟ್ಟು ೧.೮೫ ಲಕ್ಷ ಸದಸ್ಯರನ್ನು ಹೊಂದಿದೆ. ೩೫ ಜಿಲ್ಲೆಗಳ ಶೈಕ್ಷಣಿಕ ಸಂಸ್ಥೆಗಳೊAದಿಗೆ ಒಡನಾಟ ಹೊಂದಿದೆ. ಶಿಕ್ಷಕರು, ನೌಕಕರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.

ಹಾಸನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಕೂಡಿಗೆ ಪಿಯು ಕಾಲೇಜಿನ ಪ್ರಾಂಶುಪಾಲ ಹಂಡ್ರAಗಿ ನಾಗರಾಜು ಮತ್ತಿತರರು ಮಾತನಾಡಿ ಶಿಕ್ಷಕ ಚೇತನ್‌ಗೆ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಘಟಕದ ಜಿಲ್ಲಾಧ್ಯಕ್ಷ ಎಚ್.ಪಿ. ಮಂಜುನಾಥ್, ತಾಲೂಕು ಘಟಕದ ಅಧ್ಯಕ್ಷ ಬಸವರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಜಿ. ಕುಮಾರ್, ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಘಟಕದ ಅಧ್ಯಕ್ಷ ರತ್ನಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್. ಶ್ರೀನಿವಾಸ್, ಯುವ ಘಟಕದ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ನಿರ್ದೇಶಕ ಹೇರೂರು ಚಂದ್ರಶೇಖರ್, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಕೆ.ಡಿ. ಮೀನಾಕ್ಷಿ ಪ್ರಾರ್ಥಿಸಿದರು. ತಾಲೂಕು ಸಂಘದ ಅಧ್ಯಕ್ಷ ಕೆ.ಟಿ. ಬಸವರಾಜು ಕಾರ್ಯಕ್ರಮ ನಿರೂಪಿಸಿದರು.