ಶೈಕ್ಷಣಿಕ ಸೌಲಭ್ಯ ಎಂಬುದು ದೇಶದ ಕಟ್ಟ ಕಡೆಯ ಪ್ರಜೆಗೂ ಸಲ್ಲಲೇಬೇಕಾದ ಹಕ್ಕು ಎಂಬ ತತ್ವ ಸಂವಿಧಾನಿಕ ನೆಲೆಗಟ್ಟಿನಲ್ಲಿ ಸಾಬೀತಾಗಿರುವುದು ಸತ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆಜಾರಿಯಾಗಿರದ ಕಾಲಘಟ್ಟದಲ್ಲಿ, ಸರಕಾರಕ್ಕೆ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಸಾಮರ್ಥ್ಯವಿಲ್ಲದ ಸನ್ನಿವೇಶದಲ್ಲಿ, ಯಾವುದೇ ಆರ್ಥಿಕ ಲಾಭದ ಉದ್ದೇಶವಿಲ್ಲದೆ "ವಿದ್ಯಾದಾನವೇ ಮಹಾದಾನ "ಎಂಬ ಉದಾತ್ತ ಪರಿಕಲ್ಪನೆಯೊಂದಿಗೆ ಅಕ್ಷರ ದಾಸೋಹದಂತಹ ಪುಣ್ಯ ಕೈಂಕರ್ಯ ವನ್ನು ಪ್ರತಿಪಾದಿಸಿದವರು ಊರ ಹಿರಿಯರು, ವಿದ್ಯಾಭಿಮಾನಿಗಳು ಹಾಗೂ ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು. ಇವರ ಪ್ರಯತ್ನದ ಫಲವಾಗಿ ಸ್ವ ಇಚ್ಛೆಯಿಂದಾಗಿ ಕನ್ನಡ ಶಾಲೆಗಳನ್ನು ಹುಟ್ಟು ಹಾಕಿ ಆ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ವೇದಿಕೆ ನಿರ್ಮಾಣ ಮಾಡಲಾಯಿತು. ಈ ಉದಾತ್ತ ಧ್ಯೇಯವನ್ನಿಟ್ಟುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಾ ಕನ್ನಡಮ್ಮನ ಸೇವೆಗೆ ಮುಡಿಪಾಗಿರುವ ಸಂಸ್ಥೆಗಳೇ ಅನುದಾನಿತ ಶಾಲೆಗಳು. ಆ ಕಾಲಕ್ಕೆ ಅದು ಸಮಾಜಸೇವೆ. ಕಾಲಕ್ರಮೇಣಸರಕಾರದ ಸಹಕಾರವೂ ಸಿಕ್ಕ ಕಾರಣ ಪ್ರತಿಯೊಂದು ಹಳ್ಳಿ ಹಳ್ಳಿಗೂ ಶಿಕ್ಷಣ ಸೌಲಭ್ಯವನ್ನು ತಲುಪಿಸಲು ಸಾಧ್ಯವಾಯಿತು. ದಾನಿಗಳು ತಮಗೆ ಸೇರಿದ ಜಮೀನನ್ನೋ, ಖಾಲಿ ಜಾಗವನ್ನೋ ಶಿಕ್ಷಣ ಸಂಸ್ಥೆಯ ನಿರ್ಮಾಣಕ್ಕಾಗಿ ಸರಕಾರಕ್ಕೆ ಬಿಟ್ಟುಕೊಟ್ಟು ಸರಕಾರದ ನಿಯಮಾವಳಿಗಳನ್ನು ಪಾಲಿಸುತ್ತಾ, ಅದರೊಂದಿಗೆ ಶಿಕ್ಷಣ ಸಂಸ್ಥೆಯನ್ನು ಪೋಷಿಸುತ್ತ ಬರುತ್ತಿರುವ ಪೋಷಕ ವೃಂದದ ಸೇವೆ ಪ್ರಶಂಶನೀಯ.
ಒಂದು ಕಾಲದಲ್ಲಿ ವಿಶೇಷವಾದ ವರ್ಚಸ್ಸು, ಘನತೆಯನ್ನು ಹೊಂದಿದ್ದ ಅನುದಾನಿತ ಶಾಲೆಗಳು ಇಂದು ಕಾಲದ ಪ್ರಭಾವಕ್ಕೆ ಸಿಲುಕಿ ನಲುಗುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿನ ಚಿಂತನೆಗಳಲ್ಲಿ ಆಮೂಲಾಗ್ರ ಬದಲಾವಣೆಗಳು ಸಂಭವಿಸುತ್ತಿದೆ. ಕನ್ನಡ ಶಾಲೆಗಳಿಗೆ ನೀಡುತ್ತಿರುವ ಆದ್ಯತೆಯಲ್ಲಿ ಅನೇಕ ಕುಂದು ಕೊರತೆಗಳಿವೆ. ಅನುದಾನಿತ ಶಾಲೆಗಳು ಇಂದು ಆಂಗ್ಲ ಮಾಧ್ಯಮ ಶಾಲೆ, ಖಾಸಗಿ ಶಾಲೆ, ಹಾಗೂ ಸರಕಾರಿ ಶಾಲೆಗಳ ಪ್ರಭಾವದ ನಡುವೆ ಸಿಲುಕಿ ಗಟ್ಟಿಯಾಗಿ ನೆಲೆಯೂರಲು ಹರಸಾಹಸ ಪಡುವಂತಾಗಿದೆ.
ಸರಕಾರದ ನಿಯಮಾವಳಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸುತ್ತಿರುವ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರಕಾರಿ ಶಿಕ್ಷಕರ ವೇತನದಂತೆಯೇ ಸರಿಸಮಾನವಾಗಿಯೇ ವೇತನವನ್ನು ನೀಡುತ್ತಾ, ಅನುದಾನಿತ ಶಾಲೆಗಳನ್ನು ನಿರ್ವಹಿಸುತ್ತಿರುವ ಆಡಳಿತ ಮಂಡಳಿಯೊAದಿಗೆ ಸಹಕರಿಸುತ್ತಾ ಬರುತ್ತಿದೆಯಾದರೂ ಇವೆಲ್ಲವನ್ನೂ ಹೊರತುಪಡಿಸಿಯೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿರುವುದು ವಿಷಾದನೀಯ ಸಂಗತಿ.
ಆಧುನಿಕತೆಯ ಜಾಲದಲ್ಲಿ, ಆಂಗ್ಲ ಭಾಷೆಯ ಮೋಹದಲ್ಲಿ ಈಗಿನ ಕನ್ನಡ ಶಾಲೆಗಳು, ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಬಹು ಗಣನೀಯವಾಗಿಯೇ ಇಳಿಯುತ್ತಿವೆ. ಸರಕಾರಿ ಶಾಲೆಗಳಿಗಾದರೆ ಶಿಕ್ಷಣ ಇಲಾಖೆ, ಸರಕಾರದಿಂದ ಧನವಿನಿಯೋಗವಾಗುತ್ತದೆ. ಇಲ್ಲಿ ಸಮಸ್ಯೆ ಎದುರಿಸುತ್ತಿರುವುದು ಅನುದಾನಿತ ಕನ್ನಡ ಶಾಲೆಗಳು. ತನ್ನ ಅವಶ್ಯಕತೆಗಳಾದ ಕಟ್ಟಡ ನಿರ್ಮಾಣ, ನೀರಿನ ಸೌಲಭ್ಯ, ಪೀಠೋಪಕರಣಗಳ ಪೂರೈಕೆ, ಶೌಚಾಲಯ ವ್ಯವಸ್ಥೆ. ಹೀಗೆ ಯಾವುದೇ ಅವಶ್ಯಕತೆಗಳ ಪೂರೈಕೆಗೂ ಇಲಾಖೆಯಿಂದಲೂ ಅನುದಾನ ನಿರೀಕ್ಷೆ ಮಾಡುವಂತಿಲ.್ಲ ಮಕ್ಕಳಿಂದಲೂ ಶುಲ್ಕ ಸಂಗ್ರಹ ಮಾಡುವಂತಿಲ್ಲ. ಹಾಗಾಗಿ ಆಡಳಿತ ಮಂಡಳಿಗಳಿಗೆ ನಿರ್ವಹಣೆ ಮಾಡುವಲ್ಲಿ ಸಮಸ್ಯೆಯಾಗುತ್ತಿದೆ. ಅನುದಾನಿತ ಶಾಲೆಗಳು ಶಿಕ್ಷಕರ ಕೊರತೆಯನ್ನೂ ಅನುಭವಿಸುತ್ತಿವೆ. ಸರಕಾರಿ ಶಿಕ್ಷಕರು ಒಬ್ಬರೋ ಅಥವಾ ಇಬ್ಬರೋ ಮಾತ್ರ ಇಂತಹ ಕಡೆಗಳಲ್ಲಿ ಆಡಳಿತ ಮಂಡಳಿಯು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶಾಲೆಗಳನ್ನು ಮುನ್ನಡೆಸುತ್ತಿವೆ. ಹೆಚ್ಚಿನ ಅನುದಾನಿತ ಶಾಲೆಗಳಲ್ಲಿ ಅಲ್ಲಿಯ ಸರಕಾರಿ ಶಿಕ್ಷಕರೇ ತಮ್ಮ ವೇತನದಿಂದ ಇಂತಿಷ್ಟು ಮೊತ್ತವನ್ನು ಕೊಟ್ಟು ಗೌರವ ಶಿಕ್ಷಕರನ್ನು ನೇಮಖಾತಿಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದು. ಇನ್ನು ಆಂಗ್ಲ ಶಾಲೆಗಳ ಪ್ರಭಾವದಿಂದಾಗಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿವೆ. ತಮ್ಮ ಹಿರಿಯರ ನೆನಪಿಗಾಗಿ ವರ್ಷಗಟ್ಟಲೆ ನಡೆಸಿಕೊಂಡು ಬಂದ ಶಾಲೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೊಸ ಪ್ರಯತ್ನವೆಂದರೆ ಅನುದಾನಿತ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸುತ್ತಿರುವುದು. ಒಂದರಲ್ಲಿ ಬಂದ ಆದಾಯದಿಂದ ಮತ್ತೊಂದನ್ನು ಉಳಿಸಿಕೊಳ್ಳುವ ಪ್ರಯತ್ನವಿದು.
ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಸೇವಾ ನಿರತ ಶಿಕ್ಷಕರಂತೂ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳ, ಪೋಷಕರ ಮನ ಒಲಿಸುವುದರ ಜೊತೆಗೆ ತಮ್ಮ ತಮ್ಮ ಕೈಯಲ್ಲಾಗುವ ಕೊಡುಗೆಯನ್ನು ನೀಡುತ್ತಾ ಶಾಲೆಗಳನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ಮುಂದುವರೆಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿಯಾಗುವಂತೆ ಮಾಡುವುದೇ ಒಂದು ದೊಡ್ಡ ಸವಾಲು ಅವರಿಗೆ. ಅನುದಾನಿತ ಶಾಲೆಗಳಲ್ಲಿ ಒಂದು ತರಗತಿಯಲ್ಲಿ ಕನಿಷ್ಟ ೨೫ ವಿದ್ಯಾರ್ಥಿಗಳು ಇರಲೇಬೇಕು ಎಂಬ ನಿಯಮವಿದೆ. ಆದರೆ ಸರ್ಕಾರಿ ಶಾಲೆಗಳಿಗೆ ಇದು ಅನ್ವಯಿಸುವುದಿಲ್ಲ. ಅಲ್ಲದೇ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಣಗೊಳಿಸಿರುವುದರಿಂದ ಮಕ್ಕಳು ಅದೇ ಶಾಲೆಯಲ್ಲಿಯೇ ಮುಂದುವರೆಯುತ್ತಾರೆ. ಹೀಗಿರುವಾಗ ಅನುದಾನಿತ ಶಾಲೆಗಳಿಗೆ ಎಂಟನೇ ತರಗತಿಗೆ ಮಕ್ಕಳು ಹೇಗೆ ಬರಲು ಸಾಧ್ಯ?
ಪ್ರತಿವರ್ಷ ಮಕ್ಕಳ ಕೊರತೆ, ಶಿಕ್ಷಕರ ಕೊರತೆ, ಮೂಲ ಸೌಲಭ್ಯಗಳ ಕೊರತೆಯಿಂದಾಗಿ ೫ ರಿಂದ ೬ ಅನುದಾನಿತ ಶಾಲೆಗಳು ಮುಚ್ಚುತ್ತಿವೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರದ್ದು ಹತ್ತಿರ ಖಾಲಿ ಇರುವ ಶಾಲೆಗಳಿಗೆ ವಾರದಲ್ಲಿ ಮೂರು ದಿನ ಒಂದೊAದು ಹಳ್ಳಿ, ಊರಿಗೆ ಹೋಗಿ ಪಾಠ ಮಾಡಬೇಕಾದ ಡೋಲಾಯಮಾನ ಪರಿಸ್ಥಿತಿಯಿದೆ. ಮುಚ್ಚಿದ ಅನುದಾನಿತ ಶಾಲೆ ದಾನ ನೀಡಿದವರಿಗೂ ಸೇರದೆ, ಸರಕಾರದ ವ್ಯಾಪ್ತಿಗೂ ಒಳಪಡದೆ ಇನ್ಯಾರಿಗೋ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವ ತಂತ್ರಗಳೂ ನಡೆಯುತ್ತಿವೆ. ಮೊದಲೆಲ್ಲಾ ಒಂದು ಗ್ರಾಮದಲ್ಲಿ ಅನುದಾನಿತ ಶಾಲೆ ಪ್ರಾರಂಭವಾದ ತಕ್ಷಣ ಅಲ್ಲಿಯ ಸ್ಥಳೀಯರಿಗೆ ವಿದ್ಯಾರ್ಹತೆಯ ಆಧಾರದ ಮೇಲೆ ಉದ್ಯೋಗಾವಕಾಶಗಳು ಸಿಗುತ್ತಿದ್ದವು. ಆದರೆ ದಿನಕÀಳೆದಂತೆ ಸರ್ಕಾರದ ನಿಯಮಾವಳಿಗಳು ಬಿಗಿಯಾಗುತ್ತಿದ್ದಂತೆ ಆ ಅವಕಾಶವೂ ಇಲ್ಲದಂತಾಗಿದೆ. ಇದರೊಂದಿಗೆ ಇಲಾಖೆಯಿಂದ ನಿಯೋಜಿಸಲ್ಪಟ್ಟ ಎಲ್ಲಾ ಸರಕಾರಿ ಸಂಬAಧಪಟ್ಟ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೆ ಮಾಡಲೇ ಬೇಕು. ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ನೋವು, ಸಮಸ್ಯೆಗಳಿಗೂ ಪರಿಹಾರ ಎಲ್ಲಿಂದ (ಶಿಕ್ಷಣ ಇಲಾಖೆಯೋ? ಆಡಳಿತ ಮಂಡಳಿಯೋ ?) ಒಂದು ವಿಧದ ತ್ರಿಶಂಕು ಪರಿಸ್ಥಿತಿ.
ಒಟ್ಟಿನಲ್ಲಿ ಕೆಲವರಿಗೆ ಅನುದಾನಿತ ಶಾಲೆಗಳು ಉಳಿದರೆ ಲಾಭ. ಕೆಲವರಿಗೆ ಮುಚ್ಚಿದರೆ ಲಾಭ. ವಿದ್ಯಾದಾನದಂತಹ ಪುಣ್ಯ ಕಾರ್ಯದಲ್ಲಿ ನಿರತವಾಗಿರುವ ಶಿಕ್ಷಣ ಸಂಸ್ಥೆಗಳು ಯಾವುದೇ ರಾಜಕೀಯದ ಗಾಳಕ್ಕೆ ಸಿಲುಕದೆ ತಮ್ಮ ಹಿರಿಯರ ಉದ್ದೇಶವನ್ನು ಪಾಲಿಸುವ ಮೂಲಕ ಸಾರ್ಥಕತೆ ಪಡೆದುಕೊಳ್ಳಲಿ.
ಶತಮಾನದ ಇತಿಹಾಸ ಇರುವ ಶಾಲೆಗಳು ಕಣ್ಣ ಮುಂದೆಯೇ ಮುಚ್ಚಿ ಹೋಗುತ್ತಿರುವುದನ್ನು ಕಂಡಾಗ ಬೇಸರವೆನಿಸುತ್ತದೆ. ವರ್ಷಗಳ ಕಾಲ ಶಿಕ್ಷಣ ಸೇವೆ ಮಾಡಿರುವ ಭವ್ಯ ಇತಿಹಾಸ ಹೊಂದಿರುವ ಶಾಲೆಗಳನ್ನು ಉಳಿಸುವುದು ಇಲಾಖೆಯಾದಿಯಾಗಿ ನಮ್ಮೆಲ್ಲರ ಕರ್ತವ್ಯ. ಸರಕಾರಿ ಶಾಲೆಗಳಿಗೆ ನೀಡಿದಂತೆ ತಕ್ಕ ಮಟ್ಟಿಗಾದರೂ ವಾರ್ಷಿಕ ಶಾಲಾನುದಾನ ನೀಡಿದರೆ ಮತ್ತು ಸರಕಾರಿ ಶಾಲಾ ಮಕ್ಕಳಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಿದರೆ ಬಹುಷಃ ಸಮಸ್ಯೆ ಬಿಗಡಾಯಿಸುವುದನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದೇನೋ.
ಊರ ದಾನಿಗಳು ಊರಿನ ಹಿರಿತನ ಕಾಪಾಡಲು ನೀಡಿದ ಕೊಡುಗೆ ಈ ಅನುದಾನಿತ ಶಾಲೆಗಳು ಇಂದು ತೆರೆಮರೆಗೆ ಸರಿಯುತ್ತಿವೆ. ಮಕ್ಕಳ ಕಿಲಕಿಲ ನಿನಾದ, ಆಟ ಪಾಠಗಳಿಂದ ಜೀವಕಳೆ ತುಂಬುತ್ತಿದ್ದ ಶಾಲೆಗಳು ಇದೀಗ ಸ್ಮಶಾನ ಮೌನಕ್ಕೆ ಶರಣಾಗುತ್ತಿವೆ.
ನಾವೆಲ್ಲರೂ ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಆಡಳಿತ ಮಂಡಳಿಯೊAದಿಗೆ ಕೈ ಜೋಡಿಸುವಂತಾದರೆ ಮಾತ್ರ ಅನುದಾನಿತ ಶಾಲೆಗಳು ಮತ್ತೆ ಪುನಃರುಜ್ಜೀವನಗೊಳ್ಳುವ ಭರವಸೆ ಇಟ್ಟುಕೊಳ್ಳಲು ಸಾಧ್ಯ.
- ಅಶೋಕ್ ಕೊಂಪುಳಿರ, ದೈಹಿಕ ಶಿಕ್ಷಣ ಶಿಕ್ಷಕರು, ಸಿದ್ದಾಪುರ ಪ್ರೌಢಶಾಲೆ, ಕೊಡಗು.