ಕಣಿವೆ, ಆ. ೬: ಬೆಂಕಿ ರೋಗದ ಬಾಣಲೆಗೆ ಬಿದ್ದಿರುವ ಶುಂಠಿ ಬೆಳೆಗೆ ಮತ್ತೆರಡು ರೋಗಗಳು ಬಾಧಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಶುಂಠಿ ಬೆಳೆಗೆ ಬೆಂಕಿ ರೋಗದ (ಫ್ರಾಕ್ಷಿ ಪೈರಿಕ್ಯುಲೇರಿಯಾ) ಜೊತೆಗೆ ಮತ್ತೆ ಎರಡು ಹೊಸದಾದ ರೋಗಗಳು ಬಾಧಿಸುತ್ತಿರುವುದನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡ ಪತ್ತೆ ಮಾಡಿರುವುದಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ದೇವಗಿರಿ ‘ಶಕ್ತಿ’ ಗೆ ತಿಳಿಸಿದ್ದಾರೆ.
ಶುಂಠಿಗೆ ದಶಕಗಳಿಂದಲೂ ಕಾಡುತ್ತಿರುವ ಬೆಂಕಿ ರೋಗದ ಜೊತೆಗೆ ದುಂಡಾಣು ಎಲೆ ಮಚ್ಚೆ ರೋಗ ಮತ್ತು ಎಲೆ ಚುಕ್ಕೆ ರೋಗಗಳು (ಕೊಲೆಟೋಟ್ರೆಂಕೊಮ್) ವ್ಯಾಪಕವಾಗಿ ಹರಡುತ್ತಿರುವ ಗಂಭೀರ ಸಂಗತಿಯನ್ನು ವಿಜ್ಞಾನಿಗಳ ತಂಡ ಪತ್ತೆ ಮಾಡಿದೆೆ.
ದಿಢೀರನೇ ಹರಡುವ ಬಾಧೆ
ಶಿಲೀಂಧ್ರ ಬಾಧಿತ ಬೆಂಕಿರೋಗದ ಕಾರಣ ರಾತ್ರಿ ಕಳೆದು ಬೆಳಗಾಗುವುದರೊಳಗೆ ಶುಂಠಿ ಬೆಳೆ ಬಾಡುತ್ತಿದೆ. ಅದಕ್ಕೆ ಔಷಧ ಕೊಡುತ್ತಿದ್ದ ಸಮಯದಲ್ಲೇ ಶುಂಠಿಗೆ ಇನ್ನೂ ಎರಡು ಬಾಧೆಗಳು ಕಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ದುAಡಾಣುವಿನ ಎಲೆ ಮಚ್ಚೆ ರೋಗ ಬಾಧಿತ ಶುಂಠಿ ಗಿಡದ ಎಲೆ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಚಿಕ್ಕ ಗಾತ್ರದ ಮಚ್ಚೆಗಳು ಕಾಣಿಸುತ್ತಿವೆ. ಫ್ರಾಕ್ಸಿ ಪೈರಿಕ್ಯುಲೇರಿಯಾ ಬಾಧಿತ ಶುಂಠಿ ಗಿಡದ ಎಲೆ ಮತ್ತು ಕಾಂಡಗಳ ಮೇಲೆ ವಜ್ರಾಕಾರ ಅಥವಾ ಕಣ್ಣಿನ ಆಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತಿವೆ.
ಎಲೆ ಚುಕ್ಕೆ ಬಾಧಿತ ಗಿಡಗಳ ಎಲೆ ಹಾಗೂ ಕಾಂಡದ ಮೇಲೆ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸಿಕೊಂಡು ನಂತರ ತಿಳಿ ಹಳದಿ ಬಣ್ಣಗಳಿಂದ ಆವೃತವಾಗಿ ಮಧ್ಯದಲ್ಲಿ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯ ಸಸ್ಯರೋಗ ಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಸೊನ್ಯಾಳ ‘ಶಕ್ತಿ’ಯೊಂದಿಗೆ ಮಾಹಿತಿ ಹಂಚಿಕೊAಡರು.
ಹವಾಮಾನ ಬದಲಾವಣೆ ಯಿಂದಾಗಿ ಶುಂಠಿಯ ಗಡ್ಡೆ ರೂಪುಗೊಳ್ಳುವ ಮುನ್ನವೇ ವ್ಯಾಪಕ ಮಳೆ ಸುರಿದ ಕಾರಣ ಹಾಗೂ ಇನ್ನೂ ಸುರಿಯುತ್ತಲೇ ಇರುವ ಪರಿಣಾಮ ಅದು ರೋಗ ಬಾಧೆ ಉಲ್ಭಣಗೊಳ್ಳಲು ಕಾರಣ ಎಂಬುದು ಸಂಶೋಧಿತ ವಿಜ್ಞಾನಿಗಳು ತಿಳಿಸಿದ್ದಾರೆ.
ಹೀಗೆ ರೋಗಕ್ಕೆ ತುತ್ತಾಗಿರುವ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳಾಗಿ ನಂತರ ಎಲೆಗಳು ಹಳದಿಯಾಗಿ ಪೂರ್ತಿ ಸುಟ್ಟಂತೆ ಭಾಸವಾಗುತ್ತವೆ.
ಹಾಗಾಗಿ ಕುಶಾಲನಗರ, ಬೈಲುಕೊಪ್ಪ, ಹೆಬ್ಬಾಲೆ, ಕೊಡ್ಲಿಪೇಟೆ, ಶನಿವಾರಸಂತೆ, ಅರಕಲಗೂಡು, ಪಿರಿಯಾಪಟ್ಟಣ ಮೊದಲಾದೆಡೆಗಳಲ್ಲಿ ರೈತರು ಬೆಳೆದಿರುವ ಶುಂಠಿ ಬೆಳೆ ಈಗಾಗಲೇ ಈ ರೋಗದಿಂದಾಗಿ ಬಹುತೇಕ ನಾಶವಾಗಿವೆ.
ಇನ್ನೂ ಕೆಲವರು ಈ ರೋಗಕ್ಕೆ ಹೆದರಿ ಖರ್ಚು ಮಾಡಿರುವ ಹಣದ ಒಂದAಶವಾದರೂ ಸಿಗಲಿ ಎಂದು ಬಹಳ ನಿರಾಸೆ ಹಾಗೂ ಬೇಸರದಿಂದಲೇ ಈ ಶುಂಠಿ ಫಸಲನ್ನು ಅವಧಿಗೂ ಮುನ್ನವೇ ಕಟಾವು ಮಾಡಿದ್ದಾರೆ.
- ಕೆ.ಎಸ್. ಮೂರ್ತಿ