ವೀರಾಜಪೇಟೆ, ಆ. ೭: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಾಡಿ ಗ್ರಾಮದಲ್ಲಿ ಕರ್ನಾಟಕ ಭೂ ಕಂದಾಯ ಅಧಿ ನಿಯಮದ ಅಡಿಯಲ್ಲಿ ರಸ್ತೆ ಒತ್ತುವರಿಯನ್ನು ಕಂದಾಯ ಅಧಿಕಾರಿಗಳು ತೆರವು ಮಾಡಿದ್ದಾರೆ.
ಕಾವಾಡಿ ಗ್ರಾಮದ ವೃದ್ದ ದಂಪತಿ ಎನ್.ಜಿ. ಸೋಮಯ್ಯ ಹಾಗೂ ಪಾರ್ವತಿ ಎಂಬವರ ಕೃಷಿ ಜಮೀನಿಗೆ ತೆರಳುವ ರಸ್ತೆಯನ್ನು ಕಾವಾಡಿ ಗ್ರಾಮದ ಕೆಲವರು ಕಳೆದ ೬೦ ವರ್ಷಗಳಿಂದ ಒತ್ತುವರಿ ಮಾಡಿ ಬೇಲಿ ನಿರ್ಮಿಸಿಕೊಂಡು ತೊಂದರೆ ನೀಡುತ್ತಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಅವರು ನೀಡಿದ ದೂರಿನನ್ವಯ ತಾಲೂಕು ದಂಡಾಧಿಕಾರಿ ಹಾಗೂ ಸರ್ವೆ ಅಧಿಕಾರಿಗಳು ಕಾವಾಡಿ ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸಿದಾಗ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿತು. ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ ೬೭ ಪ್ರಕಾರ ಸರ್ಕಾರಿ ಜಾಗವಾಗಿದ್ದು, ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವು ಮಾಡುವಂತÉ ತಹಶೀಲ್ದಾರ್ ಕಚೇರಿಯಿಂದ ಆದೇಶಿಸಲಾಯಿತು. ಅಮ್ಮತ್ತಿ ಕಂದಾಯ ಅಧಿಕಾರಿ ಅನಿಲ್ ನೇತೃತ್ವದ ತಂಡ ಜೆಸಿಬಿ ಯಂತ್ರದ ಮೂಲಕ ಒತ್ತುವರಿ ರಸ್ತೆಯನ್ನು ತೆರವುಗೊಳಿಸಿತು.