ವೀರಾಜಪೇಟೆ, ಆ. ೭: ಸಮರ್ಪಕವಾಗಿ ನೀರು ಬರುತ್ತಿಲ್ಲ, ಮೂಲಭೂತ ಸೌಕರ್ಯ ದೊರೆತ್ತಿಲ್ಲ, ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ..ಹೀಗೆ ಹತ್ತುಹಲವು ಸಮಸ್ಯೆಗಳ ಕುರಿತು ಕಡಂಗಮರೂರು ಕಾಲೋನಿ ನಿವಾಸಿಗಳು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದರು. ಅಧಿಕಾರಿಗಳ ಕಾರ್ಯವೈಖರಿ ಕಂಡು ಗರಂ ಆದ ಪೊನ್ನಣ್ಣ ಅವರು ಸೂಕ್ತ ಕ್ರಮಕ್ಕೆ ಸೂಚಿಸಿದರು.

ಕಡಂಗಮರೂರು ಕಾಲೋನಿಯಲ್ಲಿ ಟಾರ್ಪಲ್ ವಿತರಣೆ ಸಂದರ್ಭ ಜನರಿಂದ ವ್ಯಾಪಕ ದೂರುಗಳು ಕೇಳಿಬಂದವು. ಅಲ್ಲದೆ ಕಾಕೋಟುಪರಂಬು ಗ್ರಾ.ಪಂ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯದ ಕಾರ್ಯ ವೈಖರಿ ಬೆಳಕಿಗೆ ಬಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡದಿರುವ ಬಗ್ಗೆ ದೂರು ಬಂದ ಹಿನ್ನೆಲೆ ಪಿಡಿಓ ಮಂಜುಳ ಅವರನ್ನು ಪರಿಶಿಷ್ಟರ ಕಾಲೋನಿಗೆ ಕರೆಸಿಕೊಂಡು ವಿವರಣೆ ಕೇಳಲಾಯಿತು. ಈ ಸಂದರ್ಭ ಸೂಕ್ತ ಉತ್ತರ ದೊರೆಯದ ಕಾರಣ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಇಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿ ತೋರದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವಂತೆ ಖಡಕ್ ನಿರ್ದೇಶನ ನೀಡಿದರು.

ದೂರುಗಳ ಸುರಿಮಳೆ

೧೮ ಕುಟುಂಬಗಳಿಗೆ ಹಕ್ಕು ಪತ್ರ ನೀಡದೆ ಸರಕಾರದ ಸವಲತ್ತುಗಳು ಸಿಗುತ್ತಿಲ್ಲ. ಕಳೆದ ಮೇ ತಿಂಗಳ ಮಳೆಗೆ ಮರ ಬಿದ್ದು ಕುಡಿಯುವ ನೀರಿನ ವ್ಯವಸ್ಥೆಗೆ ಅಳವಡಿಸಿದ್ದ ಪರಿವರ್ತಕ ಹಾನಿಯಾಗಿ ಹಲವು ತಿಂಗಳು ಕಳೆದರೂ ಇನ್ನೂ ದುರಸ್ತಿ ಆಗಿಲ್ಲ. ಇದರಿಂದ ನೀರಿನ ಸಮಸ್ಯೆ ತಲೆದೋರಿದೆ. ತಕ್ಷಣ ಕೊಳವೆ ಬಾವಿ ಮೂಲಕ ನೀರು ಒದಗಿಸುವಂತೆ ಶಾಸಕರಲ್ಲಿ ನಿವಾಸಿಗಳು ಕೋರಿದರು.

ರುದ್ರಭೂಮಿಗೆ ದಾರಿ ಇಲ್ಲದೆ ತೊಂದರೆ ಆಗಿದ್ದರು ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಗ್ರಾ.ಪಂ. ವಿಫಲವಾಗಿದೆ. ಈ ಹಿಂದೆ ಸರಕಾರ ನಿರ್ಮಿಸಿದ ವಸತಿಗಳು ಬೀಳುವ ಹಂತದಲಿದ್ದು, ವಾಸಿಸಲು ಅಸಾಧ್ಯ ಎಂಬ ಸ್ಥಿತಿ ಇದೆ. ವಸತಿ ಕಲ್ಪಿಸಲು ಕ್ರಮವಹಿಸಬೇಕು. ಕಾಲೋನಿ ಬಳಿ ಇರುವ ವಿದ್ಯುತ್ ಕಂಬಗಳು ಮುರಿದಿದ್ದು, ತಂತಿಗಳು ಜೋತು ಬಿದ್ದರು ಚೆಸ್ಕಾಂ ನಿರ್ಲಕ್ಷö್ಯ ವಹಿಸಿದೆ ಎಂದು ದೂರಿದರು.

ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸಮಸ್ಯೆಗಳನ್ನು ಬಗ್ಗೆಹರಿಸುವ ಬಗ್ಗೆ ಭರವಸೆ ನೀಡಿ, ಕುಡಿಯುವ ನೀರಿಗಾಗಿ ಅಗತ್ಯವಾದ ಬಾವಿಯನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು.

ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು, ಸ್ಥಳೀಯ ನಿವಾಸಿಗಳು, ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು ಹಾಜರಿದ್ದರು.