ನಾಪೋಕ್ಲು, ಆ. ೭: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಸಮಸ್ತ ಹಿಂದೂ ಬಾಂಧವರಿಗಾಗಿ ಜಿಲ್ಲಾಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯನ್ನು ತಾ. ೧೭ ರಂದು ಹಳೆ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಅನಿಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ, ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರ, ಕಾಫಿ ಬೆಳೆಗಾರರಾದ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಚೀಯಕಪೂವಂಡ ಎಸ್. ಮಂಜುನಾಥ್ ಹಾಗೂ ವಕೀಲ ಕೋಡಿಮಣಿಯಂಡ ಕುಟ್ಟಪ್ಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಘದ ಅಧ್ಯಕ್ಷ ಕೆ.ಕೆ. ಅನಿಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ವತಿಯಿಂದ ‘ತಿರುವಾದಿರ ನೃತ್ಯ’ ಪ್ರದರ್ಶನ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ರಮೇಂದ್ರ ಮಾತನಾಡಿ, ಪುರುಷರ ವಿಭಾಗದ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ ರೂ. ೩೩,೩೩೩, ದ್ವಿತೀಯ ರೂ. ೨೨,೨೨೨, ತೃತೀಯ ರೂ. ೧೧,೧೧೧ ನಗದು ಸೇರಿದಂತೆ ಆಕರ್ಷಕ ಟ್ರೋಫಿ, ಮಹಿಳೆಯರ ವಿಭಾಗದ ವಿಜೇತ ತಂಡಕ್ಕೆ ರೂ. ೧೧,೧೧೧ ಮತ್ತು ಎರಡನೇ ಸ್ಥಾನ ಪಡೆದ ತಂಡಕ್ಕೆ ೫,೫೫೫ ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ಎಂದು ವಿವರಿಸಿದರು.
ಇದು ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವ ಆಟಗಾರರು ಮೂಲ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ತಂಡಗಳ ನೋಂದಣಿಗೆ ೯೬೬೩೦೨೮೮೨೩, ೯೫೩೮೮೫೧೩೪೧ ಸಂಖ್ಯೆ ಸಂಪರ್ಕಿಸುವAತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಭಿಲಾಶ್, ಖಜಾಂಚಿ ಮಣಿ ಉಪಸ್ಥಿತರಿದ್ದರು.