ವೀರಾಜಪೇಟೆ, ಆ. ೭: ಪತ್ನಿ ಮನೆ ಬಿಟ್ಟು ಹೋದಳೆಂದು ಪತಿ ರಸ್ತೆ ಬದಿಯಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ಸಮೀಪದ ಕಡಂಗ ಅರಪಟ್ಟು ಗ್ರಾಮದಲ್ಲಿ ನಡೆದಿದೆ.
ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಮ್ಮೆತೊಡು ಗ್ರಾಮದ ಬದ್ರಿಯ ನಗರದ ನಿವಾಸಿ ಹೆಚ್. ಬಿ. ದರ್ಶನ್ (೪೭) ಮೃತ ದುರ್ದೈವಿ.
ಕೌಟುಂಬಿಕ ಕಲಹದಿಂದ ದರ್ಶನ್ ಪತ್ನಿ ೧೫ ದಿನಗಳಿಂದ ಮನೆಯನ್ನು ತೊರೆದಿದ್ದರು. ಇದರಿಂದ ಮನನೊಂದು ಕಡಂಗ ಅರಪಟ್ಟು ಗ್ರಾಮದ ಚೆಯ್ಯಂಡಾಣೆ ರಸ್ತೆ ಬದಿಯ ಗದ್ದೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ದರ್ಶನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ ಮುಂದಿನ ಕ್ರಮಕೈಗೊಂಡರು.
ಮೃತನ ಪುತ್ರ ದೀಕ್ಷಿತ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.