ಮಡಿಕೇರಿ, ಆ. ೮: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ವಿಮೆ ಮೊತ್ತ ಪಾವತಿಸುವಂತೆ ವಿಮೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಬಿಟ್ಟಂಗಾಲ ಸಮೀಪದ ಅಂಬಟ್ಟಿ ಗ್ರಾಮದ ಎನ್.ಎಂ ಚೆಂಗಪ್ಪ ಅವರು ತಮ್ಮ ಕಾರಿನಲ್ಲಿ ತಾ. ೧೩.೨.೨೦೨೩ ರಂದು ಪತ್ನಿ ಶ್ವೇತ ಗೌರಮ್ಮ ಹಾಗೂ ಮಗ ಶ್ರೇಯಸ್ನೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಬಿಟ್ಟಂಗಾಲ ಬಳಿ ಲಾರಿ ಡಿಕ್ಕಿಯಾಗಿ ಚೆಂಗಪ್ಪ ಸಾವನ್ನಪ್ಪಿದ್ದರು. ಅನಂತರ ಇಫ್ಕೊ, ಟೊಕಿಯೊ ಜನರಲ್ ವಿಮೆ ಸಂಸ್ಥೆಯಲ್ಲಿ ಮಾಡಿಸಿದ್ದ ವಿಮೆಗಾಗಿ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ, ಸಂಸ್ಥೆ ಹಣ ನೀಡಲು ವಿಳಂಬ ಮಾಡಿದೆ.
ಈ ಹಿನ್ನೆಲೆ ಸೇವಾ ನ್ಯೂನತೆ ಉಂಟು ಮಾಡಿದ ಆರೋಪದಡಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಚೆಂಗಪ್ಪ ಕುಟುಂಬದವರು ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಡಾ. ಸಿ. ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ವಿಮೆ ಮೊತ್ತ ರೂ. ೧೫ ಲಕ್ಷ ಪಾವತಿಯೊಂದಿಗೆ ಮಾನಸಿಕ ವೇದನೆಗೆ ರೂ. ೫೦ ಸಾವಿರ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳಿಗೆ ರೂ. ೨೫ ಸಾವಿರ ಪಾವತಿಸುವಂತೆ ಆದೇಶ ನೀಡಿದ್ದಾರೆ.