ಚೆಟ್ಟಳ್ಳಿ, ಆ. ೮: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿ ಹಾಗೂ ಅಧಿಕ ಮೌಲ್ಯದ ಮತ್ತು ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘ ಚೆಟ್ಟಳ್ಳಿ ಇವರ ಸಹಯೋಗದಲ್ಲಿ "ಮಾಡಹಾಗಲ ಮತ್ತು ಪ್ಯಾಷನ್ಫ್ರೂಟ್ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮ ಚೆಟ್ಟಳ್ಳಿಯ ತೋಟಗಾರಿಕಾ ಕೇಂದ್ರದಲ್ಲಿ ನಡೆಯಿತು.
ಮಾಡಹಾಗಲ ಮತ್ತು ಪ್ಯಾಷನ್ಫ್ರೂಟ್ ಪ್ರದರ್ಶನವನ್ನು ಡಾ. ಜೆ. ದಿನಕರ ಅಡಿಗಾ ನಿರ್ದೇಶಕರು ಗೇರು ಸಂಶೋಧನಾ ಕೇಂದ್ರ ಪುತ್ತೂರು, ದಕ್ಷಿಣ ಕನ್ನಡ ಅವರು ಉದ್ಘಾಟಿಸಿ ಮಾತನಾಡಿ, ಮಾಡಹಾಗಲ ಮತ್ತು ಪ್ಯಾಷನ್ಫ್ರೂಟ್ ಆರೋಗ್ಯಕರ, ಲಾಭ ಹಾಗೂ ರೈತರು ಮೌಲ್ಯವರ್ಧಿತ ಆದಾಯದ ಮೂಲವಾಗಿಸಿ ಹೆಚ್ಚಿನ ಲಾಭ ಪಡೆಯಲು ತಿಳಿಸಿದರು.
ಪ್ರಗತಿ ಪರ ರೈತ ಹಾಗೂ ಎಸ್.ಪಿ.ಹೆಚ್.ಈ.ಹೆಚ್.ಸಿ. ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಸಂಘದ ಉದ್ದೇಶ ಹಾಗೂ ಗುರಿಯ ಬಗ್ಗೆ ತಿಳಿಸುವ ಮೂಲಕ ಹೆಚ್ವಿನ ರೈತರು ಸಂಘದ ಸದಸ್ಯರಾಗ ಬೇಕೆಂದರು. ಹಿರಿಯ ವಿಜ್ಞಾನಿ ಹಾಗೂ ಕೇಂದ್ರದ ಪ್ರಬಾರ ಮುಖ್ಯಸ್ಥ ಡಾ. ಮುರುಳೀಧರ್ ಬಿ.ಎಂ. ಮಾತನಾಡಿ, ಕೇಂದ್ರದ ಅಭಿವೃದ್ಧಿಯ ಪ್ಯಾಷನ್ಫ್ರೂಟ್ನ ಕಾವೇರಿ ತಳಿ ಹಾಗೂ ಮಾಡಹಾಗಲ ಕಾಯಿಯ ಅರ್ಕಾ ಭಾರತ್ ತಳಿಯ ವಿಶೇಷತೆಗಳನ್ನು ವಿಸ್ತರಣೆಗೊಳಿಸಿರುವ ಬಗ್ಗೆ ತಿಳಿಸಿದರು.
ತಾಂತ್ರಿಕ ವಿಷಯ ಮಂಡನೆ : ಪ್ಯಾಷನ್ಫ್ರೂಟ್ ವೈಜ್ಞಾನಿಕ ಕೃಷಿಯ ಬಗ್ಗೆ ಡಾ. ನಯನ ದೀಪಕ್ ಜಿ. ಕೃಷಿ ವಿಜ್ಞಾನಿಗಳು ಹಾಗೂ ಮಾಡಹಾಗಲ ಕಾಯಿಯ ವೈಜ್ಞಾನಿಕ ಕೃಷಿಯ ಬಗ್ಗೆ ಡಾ. ರಾಜೇಂದಿರನ್ ಎಸ್. ಹಿರಿಯ ವಿಜ್ಞಾನಿಗಳು ತಿಳಿಸಿದರು. ನಂತರ ರೈತರು - ಕೃಷಿ ವಿಜ್ಞಾನಿಗಳ ಸಂವಾದ ನಡೆಯಿತು ನಂತರ ಮಾಡಹಾಗಲ ಮತ್ತು ಪ್ಯಾಷನ್ಫ್ರೂಟ್ ಕ್ಷೇತ್ರ ಭೇಟಿ ನಡೆಯಿತು.
ಐ.ಹೆಚ್.ಆರ್. ಗೀತೆಯೊಂದಿಗೆ ಪ್ರಾರಂಭಗೊAಡ ಸಭಾ ಕಾರ್ಯಕ್ರಮದಲ್ಲಿ ಡಾ. ರಾಜೇಂದಿರನ್ ಸ್ವಾಗತಿಸಿ, ಡಾ. ನಯನ ದೀಪಕ್ ಜಿ. ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಮಾಡಹಾಗಲ ಮತ್ತು ಪ್ಯಾಷನ್ಫ್ರೂಟ್ ಕೈಪಿಡಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ ರೈತರು ಭಾಗವಹಿಸಿದ್ದರು.