ನಾಪೋಕ್ಲು, ಆ. ೯ : ಕಾಫಿ ಮಂಡಳಿಯ ಮಾಹಿತಿಗಳನ್ನು ಸದುಪಯೋಗಪಡಿಸಿಕೊಂಡು ಕಾಫಿ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಬಗ್ಗೆ ಕಾರ್ಯತತ್ಪರರಾಗಬೇಕು ಎಂದು ಕಾಫಿ ಮಂಡಳಿಯ ಉಪನಿರ್ದೇಶಕ ವಿ. ಚಂದ್ರಶೇಖರ್ ಹೇಳಿದರು.
ಕಾಫಿ ಮಂಡಳಿ ಮತ್ತು ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಘದ ಸಂಯುಕ್ತ ಆಶ್ರಯದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಳನ್ನು ಬೆಳೆಸುವ ಮತ್ತು ಅದರ ಪಾಲನೆ, ಪೋಷಣೆ ಹಾಗೂ ಕಾಫಿ ಮಂಡಳಿ ವತಿಯಿಂದ ದೊರೆಯುವ ಇತರ ಸೌಲಭ್ಯದ ಬಗ್ಗೆ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಹಳೆಯ ವಿಧಾನಗಳನ್ನೇ ಅನುಸರಿಸುವ ಬದಲು ಕಾಫಿ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆಯುವ ಬಗ್ಗೆ ಚಿಂತನೆ ನಡೆಸಬೇಕೆಂದು ಕಿವಿಮಾತು ಹೇಳಿದರು. ಡಾ. ಶಿವಲಿಂಗು ಅವರು ಕಾಫಿ ಗಿಡಗಳನ್ನು ಮಾಡುವ ಮತ್ತು ನೆಡುವ ವಿಧಾನಗಳ ಡಿಜಿಟಲ್ ಪ್ರಾತ್ಯಕ್ಷಿಕೆ ನಡೆಸಿದರು. ವಿಜ್ಞಾನಿಗಳಾದ ಡಾ ಅಕ್ಷಿತ ಅವರು ಕಾಳುಮೆಣಸು ಹಾಗೂ ಏಲಕ್ಕಿ ಗಿಡಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಸುಕ್‌ಡೆನ್ ಸಂಸ್ಥೆಯ ಪ್ರತಿನಿಧಿ ಪ್ರಕೃತಿ ತಮ್ಮ ಕಾಫಿಯನ್ನು ಉತ್ತಮ ಬೆಲೆಗೆ ಖರೀದಿ ಮಾಡುವ ಬಗ್ಗೆ, ಮಣ್ಣು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ತಿಳಿಸಿದರು. ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿ, ಉದ್ಘಾಟಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಸದಸ್ಯರಾದ ಮಣವಟ್ಟಿದ ಕುಶಾಲಪ್ಪ, ಮಾಯಮ್ಮ, ಮಚ್ಚುರ ರವೀಂದ್ರ, ಬಲ್ಲತ್‌ನಾಡು ಫಾರ್ಮರ್ಸ್ ಕ್ಲಬ್‌ನ ಅಧ್ಯಕ್ಷ ಕರವಂಡ ಲವ ನಾಣಯ್ಯ, ಮಹಿಳಾ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ವನು ವಸಂತ್, ಮಂಡಳಿ ವಿಜ್ಞಾನಿ ಚಂದ್ರಶೇಖರ್, ಶಿವಲಿಂಗೇಗೌಡ, ಕಾಫಿ ಮಂಡಳಿ ತಜ್ಞರು ಉಪಸ್ಥಿತರಿದ್ದು, ಕಾಫಿ ಬೆಳೆಗಾರರಿಗೆ ಸಲಹೆ - ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು.