ಚೆಟ್ಟಳ್ಳಿ, ಆ. ೯: ಚೆಟ್ಟಳ್ಳಿ ಪ್ರೌಢಶಾಲೆಯ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಶಾಲೆಗಳಲ್ಲಿ ನಿಜವಾದ ಪ್ರತಿಭಾವಂತರು ರೂಪುಗೊಳ್ಳುತ್ತಾರೆ. ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳು ಅನಾವರಣಗೊಳ್ಳಲು ವಿದ್ಯಾರ್ಥಿ ಸಂಘ ಬಹಳ ಮುಖ್ಯ. ವಿದ್ಯಾರ್ಥಿಗಳು ಗುರುಗಳ ಮಹತ್ವವನ್ನು ಅರಿತು ಮುನ್ನಡೆದು ತಪ್ಪು ತಿದ್ದಿಕೊಂಡು ಸನ್ಮಾರ್ಗದಲ್ಲಿ ತೆರಳಿದರೆ ಶ್ರೇಷ್ಠ ನಾಯಕರಾಗಬಹುದು. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ರೂಢಿಸಿಕೊಳ್ಳುತ್ತ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಮಾತನಾಡಿ, ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ನಾಯಕತ್ವ ಗುಣಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಕೆ. ತಿಲಕ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ನಿರೂಪಣೆಯನ್ನು ಶಿಕ್ಷಕಿ ಯು. ಸುನಂದ ಮಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.