ಮಡಿಕೇರಿ, ಆ. ೯: ಗಾಳಿಬೀಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಗೆ ಬರುವ ಕಂದಾಯ ಗ್ರಾಮಗಳಾದ ಕಾಲೂರು ಹಾಗೂ ಹಮ್ಮಿಯಾಲ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಶ್ರೀನಾಥ್ ಅವರು ತಂಬಾಕು ಮುಕ್ತ ಗ್ರಾಮ ಘೋಷಣೆ, ಗೃಹ ಆರೋಗ್ಯ ಯೋಜನೆ, ಕುಷ್ಠರೋಗ ಪತ್ತೆ ಅಭಿಯಾನ, ಕ್ಷಯರೋಗ ಮುಕ್ತ ಮತ್ತು ಡೆಂಗ್ಯೂ ನಿಯಂತ್ರಣ ಕುರಿತು ಮಾಹಿತಿ ನೀಡಿ ಪಂಚಾಯಿತಿ ಸಹಕಾರ ನೀಡುವಂತೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಾಲಾಕ್ಷ ಸ್ತನ್ಯಪಾನ ಸಪ್ತಾಹ ಕುರಿತು ತಾಯಂದಿರು ಶಿಶುವಿಗೆ ಎದೆಹಾಲು ನೀಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ತಂಬಾಕು ಕೋಶದ ಪುನೀತ, ಮಂಜುನಾಥ್ ತಂಬಾಕು ಮುಕ್ತ ಗ್ರಾಮದ ಮಾರ್ಗಸೂಚಿ ಕುರಿತು ವಿವರಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಶೇಖರ ಮತ್ತು ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಹಾಜರಿದ್ದರು.