ಸೋಮವಾರಪೇಟೆ,ಆ.೧೨: ಸಿ ಮತ್ತು ಡಿ ಮತ್ತು ಸೆಕ್ಷನ್-೪, ಸೆಕ್ಷನ್-೫ ಸೇರಿದಂತೆ ಕಂದಾಯ-ಅರಣ್ಯ ಇಲಾಖೆಯ ಕೆಲವೊಂದು ಆದೇಶಗಳ ವಿರುದ್ಧ ರೈತ ಹೋರಾಟ ಸಮಿತಿ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್ ಕರೆಗೆ ಸೋಮವಾರಪೇಟೆ ತಾಲೂಕಿನ ಜನತೆ ಕೈಜೋಡಿಸಿದ್ದು, ಮಾದಾಪುರದಿಂದ ಹಿಡಿದು ಕೊಡ್ಲಿಪೇಟೆ-ಆಲೂರು ಸಿದ್ದಾಪುರದಿಂದ ಶಾಂತಳ್ಳಿವರೆಗೆ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಯಿತು.
ಹಲವಾರು ದಶಕಗಳಿಂದ ನೆಲೆಸಿರುವ, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕೃಷಿಕರ ಜಮೀನುಗಳು ಸಿ & ಡಿ ಜಮೀನೆಂದು ಮಾರ್ಪಡಿಸಿ, ಅಂತಹ ಜಮೀನುಗಳನ್ನು ಸೆಕ್ಷನ್-೪ ಅನ್ವಯ ನೋಟೀಸ್ ನೀಡಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ರೈತ ಹೋರಾಟ ಸಮಿತಿ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್‌ಗೆ ಕೈಜೋಡಿಸಿದ ರೈತರು, ಪಟ್ಟಣದಲ್ಲಿ ಭಾರೀ ಪ್ರತಿಭಟನೆ ನಡೆಸಿ, ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು,
ಇದರೊಂದಿಗೆ ಮಾದಾಪುರದಿಂದ ಹಿಡಿದು ಕೊಡ್ಲಿಪೇಟೆವರೆಗೆ ಅಲ್ಲಲ್ಲಿ ರಸ್ತೆ ತಡೆ ನಡೆಸಿದ ರೈತರು, ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಸರ್ಕಾರ ಸಿ ಮತ್ತು ಡಿ ಜಾಗದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಬಂದ್ ಕರೆ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಬೆಳಗ್ಗಿನಿಂದ ಸಂಜೆಯವರೆಗೂ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವರ್ತಕರ ಸಂಘದ ಕರೆ ಹಿನ್ನೆಲೆ ವ್ಯಾಪಾರಸ್ಥರು ರೈತರ ಸಮಸ್ಯೆಗೆ ಕೈಜೋಡಿಸಿದ್ದರ ಪರಿಣಾಮ ಬಂದ್ ಯಶಸ್ವಿಯಾಯಿತು.
ಮಾದಾಪುರದಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಟೋ ಸೇರಿದಂತೆ ಬಾಡಿಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಐಗೂರಿನಲ್ಲಿಯೂ ಬಂದ್ ಕರೆಗೆ ಬೆಂಬಲ ವ್ಯಕ್ತವಾಗಿತ್ತು. ಸೋಮವಾರಪೇಟೆ ಪಟ್ಟಣ ಬೆಳಗ್ಗಿನಿಂದ ಸಂಜೆಯವರೆಗೂ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹಾಲು, ಔಷಧಿ ಸೇರಿದಂತೆ ಅತೀ ಅಗತ್ಯ ಅವಶ್ಯಕತೆಗಳ ವಾಹನಗಳ ಓಡಾಟಕ್ಕೆ ಮಾತ್ರ ಹೋರಾಟಗಾರರು ಅನುವು ಮಾಡಿಕೊಟ್ಟರು.
ಗೌಡಳ್ಳಿ, ಶಾಂತಳ್ಳಿ, ಐಗೂರು, ಆಲೂರುಸಿದ್ದಾಪುರ, ನಂದಿಗುAದ, ಕೂತಿ, ತೋಳೂರುಶೆಟ್ಟಳ್ಳಿ, ಗೋಪಾಲಪುರ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿಯೂ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಎಲ್ಲೆಡೆಯೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಂದ್ ಹಿನ್ನೆಲೆ ಜನ ಸಂಚಾರವೂ ವಿರಳವಾಗಿತ್ತು. ಆರೋಗ್ಯ ಸಂಬAಧಿತ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ತೆರಳುವ ವಾಹನಗಳಿಗೆ ಪ್ರತಿಭಟನಾಕಾರರು ಅವಕಾಶ ಕಲ್ಪಿಸಿದ್ದರು.
ಜಂಕ್ಷನ್‌ನಲ್ಲಿ ರಸ್ತೆ ತಡೆ: ಬಂದ್ ಕರೆ ಹಿನ್ನೆಲೆ ಸೋಮವಾರಪೇಟೆ ತಾಲೂಕಿನ ಎಲ್ಲಾ ಗ್ರಾಮಗಳು ಹಾಗೂ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರೂ ಪಟ್ಟಣಕ್ಕೆ ಕೆಲವು ಖಾಸಗಿ ವಾಹನಗಳು ಆಗಮಿಸುತ್ತಿದ್ದುದರಿಂದ ಇಲ್ಲಿನ ವಿವೇಕಾನಂದ ವೃತ್ತದಲ್ಲಿ ರೈತರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.
‘ನಾವುಗಳು ದಿನವೂ ಮಣ್ಣಿನಲ್ಲಿ ದುಡಿದು ದೇಶಕ್ಕೆ ಅನ್ನ ಹಾಕುತ್ತಿದ್ದೇವೆ. ಹಲವಾರು ದಶಕಗಳಿಂದ ನಮ್ಮ ಕುಟುಂಬ ಇದೇ ಮಣ್ಣಿನಲ್ಲಿ ವ್ಯವಸಾಯ ಮಾಡಿ ಬದುಕು ಕಟ್ಟಿಕೊಂಡಿದೆ. ಈಗ ನಮ್ಮ ಜಾಗವನ್ನು ಅರಣ್ಯಕ್ಕೆ ಸೇರಿಸುತ್ತಿದ್ದಾರೆ. ನಮ್ಮ ಮನೆ, ಕೃಷಿ ಜಾಗವನ್ನು ಅರಣ್ಯವೆಂದು ಘೋಷಿಸಿದರೆ ನಮ್ಮ ಜೀವನ ನಡೆಯಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ನಡೆಯುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಅವರುಗಳಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರತಿಭಟನಾಕಾರರು ಮುಂದಾದರು.
ಈ ಸಂದರ್ಭ ವಲಯ ಅರಣ್ಯಾಧಿಕಾರಿಗಳು ‘ನಿಮ್ಮಲ್ಲಿ ದಾಖಲೆ ಇದ್ದರೆ ಕೊಡಿ’ ಎಂದು ನೀಡಿದ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಯಿತು. ಈ ಬಗ್ಗೆ ಕೆಲಕಾಲ ಭಾರೀ ವಾಗ್ವಾದ ನಡೆದು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಮುಗಿಬಿದ್ದರು. ‘ನಿಮ್ಮಿಂದ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ; ಎಸಿಎಫ್‌ನ್ನು ಸ್ಥಳಕ್ಕೆ ಕರೆಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿ’ ಎಂದು ರಸ್ತೆ ತಡೆ ಮುಂದುವರೆಸಿದರು.
ಈ ಸಂದರ್ಭ ಮಾತನಾಡಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರು, ಕಳೆದ ೧೯೭೮ರಲ್ಲಿ ಕೃಷಿ ಮಾಡಿಕೊಂಡು ಬಂದಿರುವ ಭೂಮಿಯನ್ನು ಸಿ ಮತ್ತು ಡಿ ಜಾಗವೆಂದು (ಮೊದಲ ಪುಟದಿಂದ) ವರ್ಗೀಗರಿಸಿ ಈ ಜಾಗವನ್ನು ಇದೀಗ ಅರಣ್ಯ ಇಲಾಖೆಗೆ ವರ್ಗಾಯಿಸುವ ಹುನ್ನಾರ ನಡೆದಿದೆ. ಕಳೆದ ಒಂದು ವರ್ಷದಿಂದ ರೈತ ಹೋರಾಟ ಸಮಿತಿ ಈ ಸಂಬAಧ ಹೋರಾಟ ಮಾಡಿಕೊಂಡು ಬಂದಿದ್ದು, ಮುಖ್ಯಮಂತ್ರಿಗಳಿAದ ಹಿಡಿದು, ಕಂದಾಯ, ಅರಣ್ಯ ಇಲಾಖೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದರು.
ಈ ಸಂದರ್ಭ ರಾಜ್ಯ ಸರ್ಕಾರ, ಅರಣ್ಯ ಇಲಾಖಾ ಸಚಿವರಿಗೆ ಧಿಕ್ಕಾರದ ಘೋಷಣೆಗಳು ಮೊಳಗಿದವು. ಸ್ಥಳದಲ್ಲಿದ್ದ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ರೈತರ ಸಮಸ್ಯೆಗಳಿಗೆ ಕಂದಾಯ ಇಲಾಖೆ ಪೂರಕವಾಗಿ ಸ್ಪಂದಿಸಲಿದೆ ಎಂದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ರಸ್ತೆ ತಡೆ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು.
ಮಧ್ಯಾಹ್ನದ ಸುಮಾರಿಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಅವರು, ಸಿ ಮತ್ತು ಡಿ ಜಾಗ ಸಮಸ್ಯೆಗೆ ಸಂಬAಧಿಸಿದAತೆ ಈಗಾಗಲೇ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ರಿಟ್‌ಪಿಟಿಷನ್ ಹಾಕಿದ್ದೇವೆ. ಡೀಮ್ಸ್ ಫಾರೆಸ್ಟ್, ಸಿ ಮತ್ತು ಡಿ ಜಾಗದಲ್ಲಿ ಹಲವು ದಶಕಗಳಿಂದ ನೆಲೆಸಿರುವ, ಕೃಷಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ವಾಸ್ತವ ವರದಿ ಸಲ್ಲಿಸುತ್ತೇವೆ ಎಂದರು.
ಡೀಮ್ಡ್ ಫಾರೆಸ್ಟ್ ಸಂಬAಧಿತ ನಮ್ಮ ಜಿಲ್ಲೆಯಲ್ಲಿ ಆಗಿರುವ ವೈಜ್ಞಾನಿಕ ಸರ್ವೆಗಳು ಇತರ ಜಿಲ್ಲೆಗಳಲ್ಲಿ ಈವರೆಗೆ ಆಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಸಿ ಮತ್ತು ಡಿ ಜಾಗ ಸಮಸ್ಯೆ ನಿವಾರಣೆಗೆ ಜಂಟಿ ಸರ್ವೆ ಮಾಡಲಾಗುವುದು. ಕಂದಾಯ, ಅರಣ್ಯ ಹಾಗೂ ಸರ್ವೆ ಇಲಾಖೆಗಳನ್ನು ಒಳಗೊಂಡAತೆ ಸರ್ವೆ ನಡೆಸುವ ಸಂದರ್ಭ ಸ್ಥಳೀಯ ಕಂದಾಯ ಇಲಾಖೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು, ರೈತ ಮುಖಂಡರಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಸ್ಥಳಕ್ಕಾಗಮಿಸಿದ ಎಸಿಎಫ್ ಗೋಪಾಲ್ ಮಾತನಾಡಿ, ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಅನ್ವಯ ಸಮಿತಿ ರಚಿಸಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದಲ್ಲಿ ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚನೆಯಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಓ, ಆರ್‌ಎಫ್‌ಓ ಅವರುಗಳು ಸದಸ್ಯರಾಗಿರುತ್ತಾರೆ. ಅಲ್ಲಿಂದ ಸರ್ವೆ ಮಾಡಿ ಬರುವ ವರದಿಯನ್ನು ವಸ್ತು ಸ್ಥಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಂಟಿ ಸರ್ವೆಗೆ ಗ್ರಾಮಸ್ಥರು ಅವಕಾಶ ಮಾಡಿಕೊಡಬೇಕು ಎಂದರು.
ಸಿ ಮತ್ತು ಡಿ ಹಾಗೂ ಸೆಕ್ಷನ್-೪ ಸಂಬAಧಿತ ಯಾವುದೇ ನೋಟೀಸ್‌ಗಳನ್ನು ರೈತರಿಗೆ ನೀಡಬಾರದು. ಜಂಟಿ ಸರ್ವೆ ಆಗುವವರೆಗೂ ಅರಣ್ಯ ಇಲಾಖೆಯಿಂದ ಸರ್ವೆಗಾಗಿ ಗ್ರಾಮಗಳಿಗೆ ಬರಬಾರದು ಎಂದು ಸಂಬAಧಿಸಿದ ಇಲಾಖೆಗೆ ಸೂಚಿಸಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು. ಇದಕ್ಕೆ ಜಿಲ್ಲಾಧಿಕಾರಿ ವೆಂಕಟ್‌ರಾಜ ಅವರು ಒಪ್ಪಿಗೆ ಸೂಚಿಸಿದರಲ್ಲದೆ, ಜಂಟಿ ಸರ್ವೆ ಸಂದರ್ಭ ಸ್ಥಳೀಯ ರೈತ ಪ್ರಮುಖರು, ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುವುದು. ವಾಸ್ತವಾಂಶದ ವರದಿಯನ್ನೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‌ಕುಮಾರ್, ಇನ್ಸ್ಪೆಕ್ಟರ್ ಮುದ್ದುಮಾದೇವ ಅವರುಗಳು ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಸೋಮವಾರಪೇಟೆ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಜಮಾವಣೆಗೊಂಡ ಗ್ರಾಮೀಣ ಭಾಗದ ರೈತರು, ಹೋರಾಟಗಾರರು ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು. ಕೆಲವು ಪ್ರವಾಸಿ ವಾಹನಗಳ ಎದುರು ಕುಳಿತು ಅಡ್ಡಗಟ್ಟಿದರು. ಆರೋಗ್ಯ ಸಂಬAಧಿತ ಚಿಕಿತ್ಸೆಗಾಗಿ ತೆರಳುವವರಿಗೆ ಯಾವುದೇ ತಡೆಯಿರಲಿಲ್ಲ.
ರೈತ ಹೋರಾಟ ಸಮಿತಿ ಕರೆ ನೀಡಿದ ಬಂದ್ ಹಾಗೂ ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕರಾದ ಬಿ.ಜೆ. ದೀಪಕ್, ಹರಗ ಮಿಥುನ್, ಬಗ್ಗನ ಅನಿಲ್, ಕೂತಿ ದಿವಾಕರ್, ಕೆ.ಎಂ. ಲೋಕೇಶ್, ಚೌಡ್ಲು ಯೋಗೇಂದ್ರ, ಗೌಡಳ್ಳಿ ಪ್ರಸಿ, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ಬೆಳೆಗಾರ ಸಂಘದ ಅಧ್ಯಕ್ಷ ಬಿ.ಎಂ. ಲವ ಸೇರಿದಂತೆ, ಹತ್ತಾರು ಗ್ರಾಮ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾವಿರಾರು ಮಂದಿ ರೈತರು, ರೈತ ಮಹಿಳೆಯರು ಇತರರು ಭಾಗವಹಿಸಿ ದ್ದರು. ಇದರೊಂದಿಗೆ ಮಾಜಿ ಎಂ.ಎಲ್.ಸಿ. ಮೇದಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಬಿಜೆಪಿ ಪ್ರಮುಖರಾದ ಶರತ್‌ಚಂದ್ರ, ಕೆ.ಕೆ. ಸುಧಾಕರ್, ಎಸ್.ಆರ್. ಸೋಮೇಶ್, ಅಜೀಶ್‌ಕುಮಾರ್, ಹರಗ ಧರ್ಮಪ್ಪ, ಯಡೂರು ಭಾನು ಪ್ರಕಾಶ್, ಸಾಮಾಜಿಕ ಹೋರಾಟಗಾರ ಹೊಸಬೀಡು ಪವನ್, ಕಾಂಗ್ರೆಸ್ ಮುಖಂಡರಾದ ವಿ.ಎ. ಲಾರೆನ್ಸ್, ಮಚ್ಚಂಡ ಅಶೋಕ್, ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯಕುಮಾರ್, ಪದ್ಮನಾಭ್ ಸೇರಿದಂತೆ ಇತರರು ಭಾಗ ವಹಿಸಿದ್ದರು.
- ವಿಜಯ್ ಹಾನಗಲ್ ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಕರೆನೀಡಿದ್ದ ತಾಲೂಕು ಬಂದ್‌ಗೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮತ್ತು ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಇಲ್ಲಿ ವರ್ತಕರು ಸ್ವಯಂಪ್ರೇರಿತರಾಗಿ ಹೊಟೇಲ್, ಕ್ಯಾಂಟೀನ್, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರೈತ ಹೋರಾಟಗಾರರು ನಡೆಸಿದ ಬಂದ್‌ಗೆ ಬೆಂಬಲ ನೀಡಿದ್ದರು.
ಕೊಡ್ಲಿಪೇಟೆ ವರ್ತಕರ ಸಂಘ, ಕರ್ನಾಟಕ ರಕ್ಷಣ ವೇದಿಕೆ, ರೈತ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ಮಂಗಳವಾರ ನಡೆದ ತಾಲೂಕು ಬಂದ್‌ಗೆ ಬೆಂಬಲ ನೀಡಿದರು. ಬೆಳಗ್ಗೆ ೬ ರಿಂದ ಸಂಜೆ ೬ ವರೆಗೆ ಕೊಡ್ಲಿಪೇಟೆ ವರ್ತಕರು ಸ್ವಯಂಪ್ರೇರಿತರಾಗಿ ಹೊಟೇಲು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ಅರಕಲಗೂಡು, ಸಕಲೇಶಪುರ, ಹಾಸನ ಕಡೆಗೆ ಸಂಚರಿಸುವ ರಸ್ತೆ ಸಾರಿಗೆ ಬಸ್ಸು ಹೊರತು ಪಡಿಸಿದಂತೆ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.
ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿದ ರೈತ ಹೋರಾಟಗಾರರು ಮತ್ತು ಬಂದ್‌ಗೆ ಬೆಂಬಲ ನೀಡಿದ ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಸಿ ಮತ್ತು ಡಿ ಲ್ಯಾಂಡ್ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಮತ್ತು ರೈತರ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರವನ್ನು ಖಂಡಿಸಿದರು. ನಂತರ ರೈತ ಹೋರಾಟಗಾರರು ಮನವಿ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದರು. ರೈತ ಹೋರಾಟ ಸಭೆಯಲ್ಲಿ ವರ್ತಕರ ಸಂಘದ ಯತೀಶ್‌ಕುಮರ್, ಪ್ರಮುಖರಾದ ಕೆ.ಆರ್. ಚಂದ್ರಶೇಖರ್, ಶಿವಕುಮಾರ್, ಭಗವಾನ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಸಮಿಪದ ಆಲೂರುಸಿದ್ದಾಪುರ ರೈತ ಹೋರಾಟ ಸಮಿತಿ, ವಿವಿಧ ಸಂಘ ಸಂಸ್ಥೆಗಳು, ರೈತರು ಮತ್ತು ಸಾರ್ವಜನಿಕರು ಬಂದ್‌ಗೆ ಬೆಂಬಲ ನೀಡಿದ್ದರು. ಆಲೂರು ಸಿದ್ದಾಪುರದ ಹೊಟೇಲ್, ಕ್ಯಾಂಟೀನ್, ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿದರು. ರೈತ ಹೋರಾಟಗಾರರು ಗ್ರಾಮದ ಜಂಕ್ಷನ್‌ನಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಸಂಚಾರ ಮಾಡುತ್ತಿದ್ದ ಖಾಸಗಿ ವಾಹನಗಳನ್ನು ತಡೆದು ನಂತರ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಗ್ರಾಮದ ಜಂಕ್ಷನ್‌ನಲ್ಲಿ ಸಭೆ ಸೇರಿದ ರೈತ ಹೋರಾಟಗಾರರು ಸಿ ಮತ್ತು ಡಿ ಭೂಮಿ ವಿಚಾರದಲ್ಲಿ ಅರಣ್ಯ ಇಲಾಖೆಯ ನಿಲುವನ್ನು ಖಂಡಿಸಿದರು. ಈ ವಿಚಾರದ ಬಗ್ಗೆ ಹಲವಾರು ಬಾರಿ ಶಾಸಕರುಗಳು, ಸರಕಾರದ ಗಮನಕ್ಕೆ ತಂದರೂ ಸರಕಾರದಿಂದ ಸಕಾರಾತ್ಮಕ ಸ್ಪಂದನ ದೊರೆಯುತ್ತಿಲ.್ಲ ಈ ಕಾರಣದಿಂದ ಮುಂದಿನ ದಿನದಲ್ಲಿ ರೈತರು ದೊಡ್ಡಮಟ್ಟದಲ್ಲಿ ಹೋರಾಟದ ಹಾದಿಹಿಡಿಯುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿದರು. ನಂತರ ರೈತ ಮುಖಂಡರು ಈ ಕುರಿತಾದ ಮನವಿ ಪತ್ರವನ್ನು ಗ್ರಾ.ಪಂ. ಪಿಡಿಓ ಮೂಲಕ ಶಾಸಕರಿಗೆ ಸಲ್ಲಿಸಿದರು. ಈ ಸಂದರ್ಭ ಪ್ರಮುಖರಾದ ಎಸ್.ಜೆ.ಪ್ರಸನ್ನ, ಕೆ.ವಿ. ಜಯಕುಮಾರ್, ಸತೀಶ್‌ಕುಮಾರ್, ಎ.ಜಿ. ವಿಜಯ್, ಕಿರಣ್ ಸೇರಿದಂತೆ ನೂರಾರು ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು. -ಭಾಸ್ಕರ್ ಮುಳ್ಳೂರುಶಾಂತಳ್ಳಿ ಸ್ತಬ್ಧ
ಸಿ ಮತ್ತು ಡಿ ಜಾಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುವ ಶಾಂತಳ್ಳಿ ಹೋಬಳಿಯಾದ್ಯಂತ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ವರ್ತಕರು ಸೇರಿದಂತೆ ಕೃಷಿPರು ಪಟ್ಟಣಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಂದ್‌ಗೆ ಬೆಂಬಲ ನೀಡಿದ್ದರಿಂದ ಸಹಕಾರ ಸಂಘದಲ್ಲಿ ವಹಿವಾಟುಗಳು ನಡೆಯಲಿಲ್ಲ. ಶಾಂತಳ್ಳಿ ಹೋಬಳಿಯಾದ್ಯಂತ ಮನೆಗಳಿಂದ ಒಬ್ಬರಂತೆ ಬಂದ್‌ನಲ್ಲಿ ಭಾಗಿಯಾಗಿದ್ದರು.
ತೋಳೂರುಶೆಟ್ಟಳ್ಳಿ ಬಂದ್: ಪಟ್ಟಣ ಸಮೀಪ ತೋಳೂರುಶೆಟ್ಟಳ್ಳಿಯಲ್ಲಿಯೂ ಭಾರೀ ಬೆಂಬಲ ವ್ಯಕ್ತವಾಯಿತು. ಗ್ರಾಮದ ಮಧ್ಯ ಭಾಗದಲ್ಲಿರುವ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಖಾಸಗಿ ವಾಹನಗಳ ಸಂಚಾರಕ್ಕೂ ತಡೆಯೊಡ್ಡಲಾಗಿತ್ತು. ಕೂತಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಕಡಿದು ಹಾಕಲಾಗಿತ್ತು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತಡೆಯಾಗಿತ್ತು.