ಕೂಡಿಗೆ, ಆ. ೧೨: ಹಾರಂಗಿ ಸಾಕಾನೆ ಶಿಬಿರದಲ್ಲಿ ವಿಶ್ವ ಆನೆಹಬ್ಬ ನಡೆಯಿತು. ಕಾರ್ಯಕ್ರಮವನ್ನು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭದ್ರಾ ಅಭಯಾರಣ್ಯದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಗುರುತಿಸಿ ರೈಲ್ವೆ ಕಂಬಿಗಳನ್ನು ಅಳವಡಿಸಿ ಸೆರೆಹಿಡಿದ ಕಾಡಾನೆಗಳನ್ನು ಆ ಜಾಗದಲ್ಲಿ ಬಿಡುವ ಸಾಫ್ಟ್ ರಿಲೀಸ್ ಯೋಜನೆಯಂತೆ ಕೊಡಗಿನಲ್ಲಿಯೂ ಪಕ್ಕದ ಮೂರು ಜಿಲ್ಲೆಗಳಿಗೆ ಅನುಕೂಲವಾಗುವಂತೆ ಸಾಫ್ಟ್ ರಿಲೀಸ್ ಯೋಜನೆಗೆ ವೀರಾಜಪೇಟೆ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆದಿದ್ದು ಅದನ್ನು ಕಾರ್ಯಗತಗೊಳಿಸಲು ಚಿಂತನೆ ಹರಿಸಲಾಗಿದೆ ಎಂದರು.
ವಿಶ್ವದಲ್ಲಿ ೪ಲಕ್ಷ ೧೫ ಸಾವಿರದಷ್ಟು ಆನೆಗಳಿದ್ದು, ಭಾರತದಲ್ಲಿ ೨೭ಸಾವಿರದಷ್ಟಿವೆ. ಅದರಲ್ಲಿಯೂ ಕರ್ನಾಟಕದಲ್ಲಿ ೬.೩೯೫ ಆನೆಗಳಿದ್ದು, ದೇಶದÀಲ್ಲೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕಾಡಾನೆಗಳಿವೆ. ಆದರೆ ೨೦೧೬ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ ೧ ಲಕ್ಷದ
(ಮೊದಲ ಪುಟದಿಂದ) ೧೦ ಸಾವಿರದಷ್ಟು ಆನೆಗಳ ಸಂತತಿ ಕಡಿಮೆಯಾಗಿರುವುದು ಆಂತಕಕಾರಿ ಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ವಹಿಸಿ ಮಾತನಾಡಿ, ಕಾಡಾನೆಗಳ ರಕ್ಷಣೆ ಕೇವಲ ಇಲಾಖೆ ಅಥವಾ ಸರಕಾರದ ಜವಾಬ್ದಾರಿಯಲ್ಲ, ಇದರಲ್ಲ್ಲಿ ಕಾಡಂಚಿನ ಜನರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹುಮುಖ್ಯ ವಾಗಿರುತ್ತದೆ ಎಂದು ಹೇಳಿದರು. ಮಡಿಕೇರಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್, ತಿತಿಮತಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕೆ.ಗೋಪಾಲ್, ವನ್ಯಜೀವಿ ವಿಭಾಗದ ಉಪ ಸಂರಕ್ಷಣಾ ಅಧಿಕಾರಿ ಕಾರ್ಯಪ್ಪ, ನಿವೃತ್ತ ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಭುವನೇಶ್ ಕೂಕ್ಕೆ, ಸೋಮವಾರ ಪೇಟೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಶಶಿಧರ್, ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಕೆ. ದಿನೇಶ್, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಡಿಆರ್‌ಎಫ್‌ಓ ರಂಜನ್ ಸೇರಿದಂತೆ ವಿವಿಧ ಭಾಗದ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.
ಆನೆ ಹಬ್ಬದ ಅಂಗವಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಸಂಕೇತ್ ಪೂವಯ್ಯ ವಿತರಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಆನೆಗಳ ಸಂರಕ್ಷಣೆ, ಪರಿಸರ, ಪ್ರಕೃತಿಯ ಬಗ್ಗೆ ಮಾಹಿತಿ ನೀಡಲಾಯಿತು.
ಆನೆ ಹಬ್ಬ ದಿನದ ಅಂಗವಾಗಿ ಹಾರಂಗಿಯಲ್ಲಿರುವ ಸಾಕಾನೆಗಳಾದ. ಲಕ್ಷö್ಮಣ, ಏಕದಂತ, ರಾಮ, ವಿಕ್ರಮ, ಈಶ್ವರ, ಕರ್ಣ ಆನೆಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ವಿವಿಧ ಬಗೆಯ ಆಹಾರಗಳನ್ನು ನೀಡಲಾಯಿತು.
-ಕೆ.ಕೆ. ನಾಗರಾಜಶೆಟ್ಟಿ, ಚಿತ್ರ : ಕರುಣ್