ಸುಂಟಿಕೊಪ್ಪ, ಆ.೧೨: ಈ ದರೋಡೆ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ದರೋಡೆಕೋರರ ಪತ್ತೆಯಾಗಿಲ್ಲ, ಕಳ್ಳರು ದೋಚಿಕೊಂಡು ಹೋಗಿರುವ ಚಿನ್ನಾಭರಣ ಮತ್ತು ಹಣ ಮರಳಿ ವಾರಸುದಾರರ ಕೈಗೆ ಸೇರಿಲ್ಲ.
ಜೀವಮಾನವಿಡೀ ಕಾಫಿ ತೋಟ, ಗದ್ದೆಯಲ್ಲಿ ಬೆವರು ಸುರಿಸಿ ದುಡಿದು, ಕಷ್ಟಪಟ್ಟು ದುಡ್ಡು ಉಳಿಸಿಕೊಂಡು ಕಷ್ಟಕಾಲಕ್ಕೆ ಉಪಯೋಗಕ್ಕೆ ಬರಲಿ ಎಂದು ಖರೀದಿಸಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಸಾವಿರಾರು ರೂ. ನಗದು ಹಣವನ್ನು ಕಳೆದುಕೊಂಡಿರುವ ವಯೋವೃದ್ಧೆ ಕಳ್ಳರನ್ನು ಪತ್ತೆಹಚ್ಚಿ ಮಾಲನ್ನು ವಾಪಸ್ ಕೊಡಿಸಿ ಎಂದು ಪೊಲೀಸ್ ಠಾಣೆಗೆ, ಎಸ್ಪಿ ಕಚೇರಿಗೆ ಅಲೆದು…ಅಲೆದು……ಹೈರಾಣಾಗಿದ್ದಾರೆ.
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಹಾರ್ ಬೈಲ್ ನಿವಾಸಿಯಾಗಿರುವ ಸರೋಜಿನಿ (೭೦) ಎಂಬ ಹಿರಿಜೀವ ಮನೆಯಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದು, ಮನೆಯ ಸಮೀಪ ಕಾಫಿ ತೋಟ ಹಾಗೂ ಗದ್ದೆಯನ್ನು ಹೊಂದಿದ್ದಾರೆ. ಕೃಷಿಯಲ್ಲಿ ತೊಡಗಿ ಬದುಕು ಸವೆಸುತ್ತಿರುವ ವೃದ್ಧೆಯ ಮನೆಗೆ ಕಳೆದ ೪ ವರ್ಷಗಳ ಹಿಂದೆ ತಾ. ೨೭.೦೪.೨೦೨೧ ರ ರಾತ್ರಿ ಸಮಯ ೭.೩೦ ಗಂಟೆಗೆ ಮೂವರು ಮುಸುಕುಧಾರಿ ಕಳ್ಳರು ನುಗ್ಗಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದರು.
ಪ್ರಕರಣ ನಡೆದು ೪ ವರ್ಷ ಕಳೆದರೂ ಕಳ್ಳರಾಗಲಿ ಅಥವಾ ಕಳ್ಳತನವಾಗಿರುವ ವಸ್ತುವಾಗಲಿ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಈ ವೃದ್ಧೆ ಕಳೆದ ನಾಲ್ಕು ವರ್ಷಗಳಿಂದಲೂ ಹಲವು ಬಾರಿ ಸುಂಟಿಕೊಪ್ಪ ಪೊಲೀಸ್ ಠಾಣೆ, ಕುಶಾಲನಗರ ಪೊಲೀಸ್
(ಮೊದಲ ಪುಟದಿಂದ) ಉಪ ಅಧೀಕ್ಷಕರ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಅಲೆದು ಅಲೆದು…ಪ್ರಯೋಜನ ಕಾಣದೇ ಕಂಗಾಲಾಗಿದ್ದಾರೆ.
ಕಳ್ಳತನ ನಡೆದ ದಿನ ಮನೆಗೆ ನುಗ್ಗಿದ್ದ ಕಳ್ಳರು ವೃದ್ಧೆಯ ಕೈಗಳನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆಯನ್ನು ತುರುಕಿ ಮನೆಯ ಲಾಕರ್ ನಲ್ಲಿದ್ದ ೩೨ ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ೨ ಗ್ರಾಂ ತೂಕದ ಚಿನ್ನದ ಉಂಗುರ, ೧೨ ಗ್ರಾಂ ತೂಕದ ಎರಡು ಕೈಬಳೆಗಳು, ಅಂದಾಜು ೫೦ ಸಾವಿರ ರೂ. ನಗದು ಹಣವನ್ನು ದೋಚಿದ್ದರು. ಈ ಸಂಬAಧ ಅಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ. ಸೆಕ್ಷನ್ ೩೯೪ ಕಲಂ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸ್ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದರು.
ಆದರೆ ಇದುವರೆಗೂ ಪೊಲೀಸ್ ಇಲಾಖೆಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಸಾವಿರಾರು ರೂ. ಕಳವು ಮಾಡಿದವರ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ತಮ್ಮ ತೋಟದಲ್ಲಿ ಕೃಷಿಯಲ್ಲಿ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಚಿನ್ನ ಹಾಗೂ ಹಣ ಎಲ್ಲವನ್ನೂ ಕಳೆದುಕೊಂಡ ಬಗ್ಗೆ ವೃದ್ಧೆ ಚಿಂತಾಕ್ರಾAತರಾಗಿ ಹಾಸಿಗೆ ಹಿಡಿಯುವ ಸ್ಥಿತಿಗೆ ತಲುಪಿದ್ದಾರೆ. ದಿನಂಪ್ರತಿ ದೇವರಲ್ಲಿ ಕಳೆದುಕೊಂಡ ಕಳುವಾದ ಚಿನ್ನ ಮತ್ತು ಹಣ ಮರಳಿ ಸಿಗುವಂತೆ ಪ್ರಾರ್ಥಿಸುತ್ತಿದ್ದಾರೆ. ಹಲವು ನಿಗೂಢ ಪ್ರಕರಣಗಳನ್ನು ಜಿಲ್ಲೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಕಳೆದ ವರ್ಷ ಯಾವುದೇ ಕುರುಹು, ಸಾಕ್ಷö್ಯವಿಲ್ಲದೇ ನಡೆದಿದ್ದ ತೆಲಂಗಾಣ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದ ಹಂತಕರನ್ನು ಸಾವಿರಾರು ಕಿ.ಮೀ. ದೂರದಿಂದ ಪತ್ತೆಹಚ್ಚಿ, ಬಂಧಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದ ಕೊಡಗು ಪೊಲೀಸ್ ಇಲಾಖೆ, ಕಳೆದ ೪ ವರ್ಷಗಳ ಹಿಂದೆ ಈ ಒಂಟಿ ಮಹಿಳೆಯ ಮನೆಯಲ್ಲಿ ನಡೆದಿರುವ ದರೋಡೆ ಪ್ರಕರಣವನ್ನು ಪತ್ತೆಹಚ್ಚುವಂತೆ ವಿನಂತಿಸಿದ್ದಾರೆ. ಇನ್ನಾದರೂ ಜೀವನದ ಸಂಧ್ಯಾ ಕಾಲದಲ್ಲಿರುವ ವಯೋವೃದ್ದೆ ಮಹಿಳೆ ಸರೋಜಿನಿ ಅವರಿಗೆ ನ್ಯಾಯಸಿಗಬಹುದೆ ಎಂಬುದನ್ನು ಕಾದು ನೋಡಬೇಕಾಗಿದೆ. -ರಾಜು ರೈ