ಶ್ರೀಮಂಗಲ, ಆ. ೧೪: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಗಣ ಗ್ರಾಮದಲ್ಲಿ ಹಸುವನ್ನು ಹುಲಿ ಬಲಿಪಡೆದು, ಒಂದು ವಾರ ಕಳೆದರೂ ಮರಣೋತ್ತರ ಪರೀಕ್ಷೆಯನ್ನು ಅರಣ್ಯ ಇಲಾಖೆ ಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಹುಲಿ ದಿನನಿತ್ಯ ಹಸುವಿನ ಕಳೇಬರವನ್ನು ತಿನ್ನಲು ಬರುತ್ತಿರುವುದು ಕ್ಯಾಮರಾದಲ್ಲಿ ಸರಿಯಾಗಿದೆ, ಹುಲಿ ಸೆರೆಗೆ ಅವಕಾಶ ಇದ್ದರೂ ಹುಲಿ ಸೆರೆಗೆ ಅರಣ್ಯ ಇಲಾಖೆ ನಿರ್ಲಕ್ಷö್ಯ ತೋರುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಕೊಂಗಣ ಗ್ರಾಮದ ಖಾಸಗಿ ತೋಟದಲ್ಲಿ ತಾ. ೬ ರಂದು ಮೂರು ವರ್ಷದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು, ಈ ವಿಷಯವನ್ನು ಮಾಕುಟ್ಟ ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಥಳಕ್ಕೆ ಬಾರದೆ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ದಿನನಿತ್ಯ ಹುಲಿಯ ಹೆಜ್ಜೆ ಗುರುತು ತೋಟದಲ್ಲಿ ಕಾಣಿಸುತ್ತಿದ್ದು ಇದರೊಂದಿಗೆ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾದಲ್ಲಿ ಹುಲಿ ಹಸುವಿನ ಕಳೇಬರವನ್ನು ತಿನ್ನಲು ಬರುತ್ತಿರುವ ಚಿತ್ರ ಸೆರೆಯಾಗಿದೆ. ಆದರೂ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.