ವೀರಾಜಪೇಟೆ, ಆ. ೧೪: ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದಲ್ಲಿ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್, ವೀರಾಜಪೇಟೆ ಯೂನಿಯನ್ ಬ್ಯಾಂಕ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜನ ಸುರಕ್ಷಾ ಅಭಿಯಾನ ನಡೆಯಿತು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ಗುರುರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಮುಖ್ಯವಾಗಿ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ ರೂ. ೨೦ ಪಾವತಿಸಿ, ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ರೂ. ೨ ಲಕ್ಷ ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ದೊರೆಯಲಿದೆ ಎಂದರು.

ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ಪ್ರಸಾದ್ ಮಾತನಾಡಿ, ವಾರ್ಷಿಕ ರೂ. ೪೩೬ ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ನಾಮಿನಿಗೆ ರೂ. ೨ ಲಕ್ಷ ವಿಮಾ ಮೊತ್ತ ದೊರೆಯುತ್ತದೆ. ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಿದಲ್ಲಿ ೬೦ ವರ್ಷ ವಯಸ್ಸಿನ ನಂತರದಲ್ಲಿ ಪಿಂಚಣಿ ರೂಪದಲ್ಲಿ ಸಾವಿರದಿಂದ ೫ ಸಾವಿರ ತನಕ ಹಣ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಅವಾರ್ಡ್ ಸಂಸ್ಥೆಯ ಆರ್ಥಿಕ ಸಮಾಲೋಚಕಿ ಜೆ.ಕೆ. ಮಂಜುಳಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.