ಶಿಕ್ಷಣದ ಉದ್ದೇಶ ಪರಿಣತಿ ಮತ್ತು ಜ್ಞಾನ ಸಂಪಾದನೆ. ಕ್ಷೇತ್ರ ಯಾವುದೇ ಇರಲಿ ಅಲ್ಲಿ ಆನಂದದಿAದ ನಮ್ಮನ್ನು ತೊಡಗಿಸಿಕೊಂಡು ಗುರಿ ಮುಟ್ಟಿದಾಗಲೇ ನಿಜವಾದ ಸಾರ್ಥಕತೆ ಒದಗುವುದು. ಆದ್ದರಿಂದ ಶಿಕ್ಷಣ ಎನ್ನುವುದು ಒಂದು ಉತ್ಸಾಹದ ನಡಿಗೆ, ಆನಂದದ ಪಯಣ. ಆ ದಾರಿವರೆಗೆ ನಮ್ಮ ನಡಿಗೆ ಯಾವತ್ತೂ ತ್ರಾಸದಾಯಕ ಆಗಬಾರದು. ನಾವು ಇಲ್ಲಿ ಇಷ್ಟಪಟ್ಟು ನಡೆಯಬೇಕೇ ಹೊರತು ಕಷ್ಟಪಟ್ಟು ನಡೆಯಬಾರದು. ಈ ಪಥಕ್ರಮಣದಲ್ಲಿ ಚೆಲುವಿದೆ, ಅದನ್ನು ಆಸ್ವಾದಿಸುವ ದಾರಿಗಳಿವೆ. ಆಡುತ್ತ, ಹಾಡುತ್ತ, ಕುಣಿಯುತ್ತ, ಸಂಭ್ರಮಿಸುತ್ತ ನಮ್ಮ ಎದೆ ಹಿಗ್ಗು ಇಲ್ಲಿ ಅರಳಬೇಕು. ಓದು ಭಯವಾಗಬಾರದು, ಭಾರವಾಗಬಾರದು.

ಕವಿ ಖಲೀಲ್ ಗಿಬ್ರಾನ್ ಅವರು ತಮ್ಮ ಕವಿತೆಯೊಂದರಲ್ಲಿ ಪೋಷಕರ ಕಣ್ತೆರೆಸುವ ಮಾತುಗಳನ್ನು ಹೇಳುತ್ತಾರೆ. "ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಜೀವನ ಸ್ವಪ್ರೇಮದ ಪುತ್ರ ಪುತ್ರಿಯರು. ನಿಮ್ಮ ಜೊತೆಗೆ ಇರುವುದರಿಂದ ಅವರು ನಿಮಗೆ ಸೇರಿದವರಲ್ಲ. ನಿಮ್ಮ ಪ್ರೀತಿಯನ್ನು ನೀವು ಅವರಿಗೆ ಕೊಡಬಹುದು. ಆದರೆ ನಿಮ್ಮ ಆಲೋಚನೆಗಳನ್ನಲ್ಲ. ಅವರಂತಿರಲು ನಾವು ಪ್ರಯತ್ನಿಸಬಹುದು. ಆದರೆ ಅವರನ್ನು ನಿಮ್ಮಂತೆ ಮಾಡಲು ಯತ್ನಿಸದಿರಿ" ಇದು ಕವಿತೆಯ ಸಾರ. ಗಿಬ್ರಾನ್ ಅವರ ಕವನದ ಮರ್ಮವನ್ನು ನಾವು ಮನನ ಮಾಡಬೇಕು. ನಿಮ್ಮ ಮೆದುಳು ಬೇರೆ. ನಿಮ್ಮ ಮಗುವಿನ ಮೆದುಳು ಬೇರೆ. ನಿಮ್ಮ ಮೆದುಳಿನ ಅಚ್ಚಿನಿಂದ ನಿಮ್ಮ ಮಗುವಿನ ಮೆದುಳು ರೂಪುಗೊಳ್ಳದಿರಲಿ. ಈ ಮಾತುಗಳಲ್ಲಿ ಶಿಕ್ಷಣದ ಮಾರ್ಗದರ್ಶಿ ತತ್ವ ಅಡಗಿದೆ. ಶಿಕ್ಷಣ ಒಂದು ಹೊರೆ ಆಗಬಾರದು ಎಂಬ ಸಾರ್ವತ್ರಿಕ ಸತ್ಯ ಇಲ್ಲಿದೆ.

ಈಗ ಐವತ್ತರ ಹರೆಯ ದಾಟಿದವರು ನಿಮ್ಮ ಬಾಲ್ಯದ ದಿನಗಳಲ್ಲಿ ಶಿಕ್ಷಣ ಕ್ರಮ ಹೇಗಿತ್ತು ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಿ. ಶಾಲೆಗೆ ಹೊರಟ ಬಳಿಕ ಮನೆ ಮತ್ತು ಶಾಲೆಯ ನಡುವಿನ ಪೇರಳೆ, ಹಲಸು, ನೆಲ್ಲಿಕಾಯಿ, ಕೊಟ್ಟೆ ಹಣ್ಣು ಮತ್ತಿತರ ಕಾಡು ಹಣ್ಣುಗಳೆಲ್ಲ ನಮಗಾಗಿಯೇ ಇದ್ದುದು! ಹೌದು ತಾನೆ? ಕದ್ದು ತಿಂದ, ಶಾಲೆಗೆ ಚಕ್ಕರ್ ಹೊಡೆದು ಮಾವಿನ ಮರ ಹತ್ತಿದ, ಹೊಳೆಯಲ್ಲಿ ಈಜಾಡಿದ ಮಕ್ಕಳು ಇಲ್ವಾ? ತರಗತಿಗಿಂತ ಮೈದಾನದ ಆಟ, ನಾಟಕ, ಹರಿಕಥೆ, ಯಕ್ಷಗಾನ ಬಯಲಾಟ ಎಂದು ಅದರ ಹಿಂದೆ ಹೋದ ಮಕ್ಕಳಿಲ್ವಾ? ಹಾಗೆ ಹೋದವರು ಶ್ರೇಷ್ಠ ಕ್ರೀಡಾಪಟುಗಳೋ ಕಲಾವಿದರೋ ಆದ ನಿದರ್ಶನಗಳು ಇಲ್ವಾ? ಈಗ ಅಂಥ ದಿನಗಳನ್ನು ನಾವು ಕಾಣಬಲ್ಲೆವೆ? ಬೇಕೆಂದರೂ ಆ ದಿನಗಳನ್ನು ಮರಳಿ ಪಡೆಯಲಾದೀತೇ? ಅಂದರೆ ಕಾಲದ ಆವಶ್ಯಕತೆಗೆ ಅನುಗುಣವಾಗಿ ಸಮಗ್ರ ಶಿಕ್ಷಣ ವ್ಯವಸ್ಥೆ ಈಗ ಬದಲಾಗಿದೆ ಎಂದರ್ಥ.

ಕಲಿಕೆ ಒಂದು ಸಹಜ ಪ್ರಕ್ರಿಯೆ. ಮಕ್ಕಳಿಗೆ ಅವರ ತಾಯ್ನುಡಿಯನ್ನು ಯಾರು ಕಲಿಸುತ್ತಾರೆ? ಕೇಳುವ, ನೋಡುವ ಮತ್ತು ತೊಡಗುವ ಮೂಲಕ ಬದುಕುವ ಕೌಶಲವನ್ನು ಮಗು ನಿರಂತರ ತನ್ನದಾಗಿಸಿಕೊಳ್ಳುತ್ತದೆ. ಡಾ. ಶಿವರಾಮ ಕಾರಂತರು ಈ ಕಾರಣಕ್ಕಾಗಿಯೇ ಶಿಕ್ಷಣವನ್ನು "ಓದುವ ಆಟ" ಎಂದರು. ಕಾರಂತರ ಬದುಕನ್ನು ಗಮನಿಸಿ. ಅವರು ಯಾವ ವಿಶ್ವ ವಿದ್ಯಾಲಯದಿಂದ ಪದವಿ ಪಡೆದರು? ಡಾಕ್ಟರೇಟ್ ಪಡೆದರು? ಅವರು ಪಿ.ಯು.ಸಿ ನಂತರದ ವಿದ್ಯಾಭ್ಯಾಸ ಪಡೆಯಲೇ ಇಲ್ಲ. ಕನ್ನಡ ನಾಡಿನ ಮಹಾ ಪ್ರತಿಭಾವಂತ, ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥ ವೃಕ್ಷ ಎಂಬ ಪ್ರಶಂಸೆಗೆ ಪಾತ್ರರಾಗಿರುವ ಡಿವಿಜಿ ಅವರು ಹದಿಹರೆಯದಲ್ಲೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆ- ಸಾಹಿತ್ಯದಲ್ಲಿ ಪರಿಣತಿ ಪಡೆದಿದ್ದರು. ಆದರೂ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅವರು ಕನ್ನಡ, ಗಣಿತ ಮತ್ತು ವಿಜ್ಞಾನ ವಿಷಯಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ!

ಜಗತ್ತಿನ ಅಗ್ರಮಾನ್ಯ ಸಾಹಿತಿ ವಿಲಿಯಂ ಶೇಕ್ಸ್ಪಿಯರ್ ಓರ್ವ ಬಡ ಉಣ್ಣೆ ವ್ಯಾಪಾರಿಯ ಮಗ. ನಾಟಕ ಕಂಪೆನಿಗಳಲ್ಲಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಈತ ಓರ್ವ ಶ್ರೀಮಂತನನ್ನು ಲೇವಡಿ ಮಾಡುವ ಪದ್ಯ ಬರೆದು ಶಿಕ್ಷೆಗೆ ಒಳಗಾದ ಎಂಬ ಕಟ್ಟುಕಥೆಯೂ ಶೇಕ್ಸ್ಪಿಯರ್ ಬಗ್ಗೆ ಇದೆ. ಈತ ವಿಶ್ವ ವಿಖ್ಯಾತ ನಾಟಕಕಾರನಾಗಲು ಎಲ್ಲಿ ಶಿಕ್ಷಣ ಪಡೆದ? ಹೀಗೆ ಜಾಗತಿಕ ಮಟ್ಟದಲ್ಲಿ ಮಹತ್ತರ ಸಾಧನೆ ಮಾಡಿದ ಕವಿಗಳು, ಕಲಾವಿದರು, ವಿಜ್ಞಾನಿಗಳು, ಸಂಶೋಧಕರು ಮತ್ತು ಸಾಧಕರ ಶೈಕ್ಷಣಿಕ ಬದುಕಿನ ಬಗ್ಗೆ ಹಲವು ರೋಚಕ ಘಟನೆಗಳು ಸಿಗುತ್ತವೆ. ಹಾಗಾದರೆ ಶಿಕ್ಷಣ ವಿಧಾನ ಎನ್ನುವುದು ಮಕ್ಕಳ ಸುಪ್ತ ಶಕ್ತಿಯನ್ನು ಆಧರಿಸಿ ರೂಪುಗೊಳ್ಳಬೇಕೇ ಅಥವಾ ದೊಡ್ಡವರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಗೊಳ್ಳಬೇಕೇ? ಬಾಯಿ ಮುಚ್ಚಿ ಸುಮ್ಮನೆ ಕೂತು ಪಾಠ ಕೇಳುವುದರಲ್ಲಿ ನಿಜ ಕಲಿಕೆ ಇದೆಯೇ? ಸೃಜನಶೀಲತೆ ಮತ್ತು ವಿಚಾರಶಕ್ತಿಯನ್ನು ಉದ್ದೀಪನಗೊಳಿಸುವುದರಲ್ಲಿ ಶ್ರೇಷ್ಟ ಶಿಕ್ಷಣ ಕ್ರಮದ ಮರ್ಮ ಅಡಗಿದೆಯೇ?

ಶಿಕ್ಷಣ ರಂಗದ ಇತ್ತೀಚಿನ ಬೆಳವಣಿಗೆ ಬಗ್ಗೆ ಈಗ ಗಮನ ಹರಿಸೋಣ. ಅಂಗೀಕೃತವಾದ ರಾಷ್ಟಿçÃಯ ಶಿಕ್ಷಣ ನೀತಿ ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಆಸ್ಥೆ ವಹಿಸಿದೆ. ಹೊಸ ಶಿಕ್ಷಣ ನೀತಿಯ ಪ್ರಕಾರ ವಿದ್ಯಾರ್ಥಿ ತನಗೆ ಪ್ರಿಯವಾದ ಹತ್ತಾರು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಜೀವನೋಲ್ಲಾಸ, ಸೃಷ್ಟಿಶೀಲತೆ, ಬಹುಮುಖ ಆಲೋಚನಾ ಶಕ್ತಿಗಳನ್ನು ಉದ್ದೀಪಿಸುವ, ಮಾನವೀಯ ಸಂಬAಧದ ಗುಣಲಕ್ಷಣಗಳನ್ನು ವೃದ್ಧಿಸುವ ಚಟುವಟಿಕೆಗಳನ್ನು ನಡೆಸಬಹುದು. ವಿದ್ಯಾರ್ಥಿಯ ಮೆದುಳಿಗೆ, ಹೃದಯಕ್ಕೆ, ಕೈಗಳಿಗೆ, ಆರೋಗ್ಯಕ್ಕೆ, ಹವ್ಯಾಸಗಳಿಗೆ, ಜೀವನ ಕೌಶಲಗಳಿಗೆ ಮತ್ತು ಬುದ್ಧಿಶಕ್ತಿಗೆ ಶಿಕ್ಷಣ ದೊರೆಯಬೇಕು. ಈ ಶಿಕ್ಷಣ ನೀತಿಯ ಪ್ರಕಾರ ಇವುಗಳನ್ನೆಲ್ಲ ಒಳಗೊಂಡ ಕಲಿಕೆಯ ಪ್ರಕ್ರಿಯೆ ವಿದ್ಯಾ ಸಂಸ್ಥೆಗಳ ಮತ್ತು ವಿದ್ಯಾರ್ಥಿಗಳ ಮುಖ್ಯ ಗುರಿ. ಅಂಕಗಳಿಕೆ ಹಾಗೂ ಪ್ರಥಮ ಶ್ರೇಣಿ ಮಾತ್ರ ಶಿಕ್ಷಣದ ಉದ್ದೇಶ ಅಲ್ಲ.

ಸರಕಾರ ಒಂದು ವಿದ್ಯಾರ್ಥಿಯ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆಯುವ ಸಂದರ್ಭ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಪದವಿ ಪಡೆದ ವಿದ್ಯಾರ್ಥಿ ಭಾರತದಲ್ಲಿ ತನ್ನ ಸೇವೆಯನ್ನು ಸಲ್ಲಿಸುವ ಬದಲು ವಿದೇಶದಲ್ಲಿ ನೆಲೆಸಿ ಉದ್ಯೋಗ ಪಡೆಯಲು ಯತ್ನಿಸುತ್ತಾನೆ. ಜೀವನಪೂರ್ತಿ ತನ್ನ ಹುಟ್ಟು ಭೂಮಿಯಲ್ಲಿ ದುಡಿಯಲು, ನೆಲೆಸಲು ಇಷ್ಟಪಡದೆ ಇರುವುದಕ್ಕೆ ಕಾರಣವೇನು? ಸ್ವತಂತ್ರ ಭಾರತದಲ್ಲಿ ವಿದ್ಯೆಗೆ ಬೆಲೆ ಇಲ್ಲದಂತಾಗಿದೆಯೇ? ಕಾರ್ಯವ್ಯಾಪ್ತಿ ಸ್ವತಂತ್ರ ಭಾರತದಲ್ಲಿ ಸೀಮಿತವಾಗಿದೆಯೇ? ಪ್ರತಿಭೆಗಳನ್ನು ಗುರುತಿಸುವ ಸ್ಥಿತಿ ಸ್ವತಂತ್ರ ಭಾರತದಲ್ಲಿ ಇನ್ನೂ ಬಂದಿಲ್ಲವೇ? ಪಡೆದ ಶಿಕ್ಷಣಕ್ಕೆ ತಕ್ಕುದಾದ ಸಂಭಾವನೆ ಸ್ವತಂತ್ರ ಭಾರತದಲ್ಲಿ ಸಿಗುತ್ತಿಲ್ಲವೆ? ಅಥವಾ ಯುವ ಜನಾಂಗ ಬಯಸುವ ಭವಿಷ್ಯದ ಭಾರತ ನಿರ್ಮಾಣವಾಗಿಲ್ಲವೇ?

ಆದರೆ ಈಗ ನಡೆಯುತ್ತಿರುವುದೇನು? ರ‍್ಯಾಂಕ್, ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿಯ ಹುಚ್ಚು ಪೋಷಕ, ಶಿಕ್ಷಕ ಮತ್ತು ಶಾಲಾ ಆಡಳಿತ ಮಂಡಳಿಯ ವಲಯದಲ್ಲಿ ಸಾಮಾನ್ಯವಾಗಿದೆ, ಸಹಜವಾಗಿದೆ. ನೂರಕ್ಕೆ ನೂರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ ಶಿಕ್ಷಣ ಸಂಸ್ಥೆಯ ಶಿಕ್ಷಣ ಗುಣಮಟ್ಟ ಅತ್ಯುತ್ತಮ. ಇನ್ನಿತರರದ್ದು ಕಳಪೆ! ಮೊದಲ ಸ್ಥಾನ ಅಥವಾ ರ‍್ಯಾಂಕ್ ಪಡೆದ ವಿದ್ಯಾರ್ಥಿ ಮಾತ್ರ ಬುದ್ಧಿವಂತ. ಉಳಿದವರು ದಡ್ಡರು! ಇದು ಕಣ್ಣು ಮುಚ್ಚಿ ನಾವೇ ಕೈಗೊಳ್ಳುವ ನಿರ್ಣಯಗಳು. ಅಂಕಗಳಲ್ಲಿ ಹಿಂದೆ ಬಿದ್ದವರ ಮಾನಸಿಕ ವೇದನೆಯನ್ನು ನಾವೆಷ್ಟು ಅರ್ಥಮಾಡಿಕೊಂಡಿದ್ದೇವೆ? ಶಾಲಾ - ಕಾಲೇಜುಗಳ ಪ್ರವೇಶಾತಿಗೆ ಪೂರ್ವಭಾವಿಯಾಗಿ ಶಿಕ್ಷಣ ಸಂಸ್ಥೆಗಳ ಸಾಧನೆಯನ್ನು ಮಾಧ್ಯಮಗಳ ಮೂಲಕ ಜಾಹೀರುಪಡಿಸುವ ವಿದ್ಯಾಸಂಸ್ಥೆಗಳ ಧೋರಣೆಯನ್ನು ಗಮನಿಸಿ. ರ‍್ಯಾಂಕ್ ಅಥವಾ ಡಿಸ್ಟಿಂಕ್ಷನ್ ಬಂದ ವಿದ್ಯಾರ್ಥಿಗಳನ್ನು ಮಾತ್ರ ವೈಭವೀಕರಿಸಲಾಗುತ್ತದೆ. ಗುಣಾತ್ಮಕ ಮೌಲ್ಯಗಳು ಇಲ್ಲಿ ಗೌಣ. ಈ ಅಂಕ ಗಳಿಕೆಯ ಹಿಂದೆ ಹಲವು ಕಸರತ್ತು, ತರಬೇತಿ, ಕೋಚಿಂಗ್ ಮತ್ತು ಕೆಲವೊಮ್ಮೆ ಅಕ್ರಮಗಳೂ ನಡೆದಿರುತ್ತವೆ ಎನ್ನುವುದು ಬೆಳಕಿನಷ್ಟೆ ಸತ್ಯ. ಶೇಕಡಾ ತೊಂಬತ್ತಕ್ಕಿAತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಮಾತ್ರ ಅಡ್ಮಿಶನ್ ಮಾಡಿಸಿಕೊಂಡು ‘ನಮ್ಮದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ' ಎಂದು ಹೇಳಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಏನಿದೆ?

ಇಂದಿನ ದಿನಗಳಲ್ಲಿ ಬೆಂಗಳೂರಿನAತಹ ಮಹಾನಗರಗಳಲ್ಲಿರುವ ಗಣ್ಯಾತಿಗಣ್ಯ ಎನಿಸಿಕೊಂಡ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸೀಟು ಪಡೆಯಬೇಕಾದರೆ ಕೇವಲ ಸಿಇಟಿ ರ‍್ಯಾಂಕ್ ಪಡೆದರೆ ಸಾಲದು. ಲಕ್ಷ ಲಕ್ಷ ಹಣ ಸುರಿಯುವ ಅನಿವಾರ್ಯತೆ ಕೂಡ ಇದೆ. ಈ ಎಲ್ಲಾ ವಿದ್ಯಮಾನಗಳನ್ನು ಮತ್ತು ಸದ್ಯದ ವಸ್ತುಸ್ಥಿತಿಯನ್ನು ಸೂಕ್ಷö್ಮವಾಗಿ ಅವಲೋಕಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಅರ್ಥಮಾಡಿಕೊಳ್ಳಬೇಕಾದ ಅಂಶಗಳು ಏನು?

ಇಂದು ಉನ್ನತ ಶಿಕ್ಷಣ ಎಂಬುದು ಬಡವರಿಗೆ ಕಬ್ಬಿಣದ ಕಡಲೆಯಂತಾಗಿದೆ. ಇಂಜಿನಿಯರಿAಗ್, ವೈದ್ಯಕೀಯ ಶಿಕ್ಷಣಗಳ ಸೀಟುಗಳು ಇಂದು ಲಕ್ಷಗಳಲ್ಲಿ ಅಲ್ಲ, ಕೋಟಿ ಕೋಟಿಗಳಲ್ಲಿ ಬಿಕರಿ ಆಗುತ್ತಿವೆ. ಉಳ್ಳವನೇ ಶಿಕ್ಷಣವಂತ ಎನ್ನುವ ಪರಿಸ್ಥಿತಿ ಸ್ವಾತಂತ್ರö್ಯದ ಕೊಡುಗೆಯೇ? ಬುದ್ಧಿವಂತರಲ್ಲದಿದ್ದರೂ, ಮುಂದೆ ಮದುವೆಯ ಸಂದರ್ಭದಲ್ಲಿ ಒಳ್ಳೆಯ ವಧುವಿನೊಂದಿಗೆ ಮದುವೆಗೆ ಖರ್ಚಾದ ಕೋಟಿಗೆ ಬಡ್ಡಿ ಸಹಿತ ಮತ್ತಷ್ಟು ಕೋಟಿ ವರದಕ್ಷಿಣೆ ಪಡೆಯುವುದಕ್ಕೋಸ್ಕರ ಇಂಜಿನಿಯರ್ ಹಾಗೂ ವೈದ್ಯರಾಗುತ್ತಿರುವುದನ್ನು ನೋಡುತ್ತಿದ್ದೇವೆ.

ಪರೀಕ್ಷೆಯ ಅಂಕಗಳೇ ಒಬ್ಬ ವಿದ್ಯಾರ್ಥಿಯ ಬುದ್ಧಿಶಕ್ತಿಯ ಸೂಚಿ ಅಲ್ಲ. ಅದೊಂದೇ ಆತನ ಸರ್ವಾಂಗೀಣ ವ್ಯಕ್ತಿತ್ವವನ್ನು ಅಳೆಯುವ ಮಾನದಂಡವೂ ಅಲ್ಲ. ಶಿಕ್ಷಣದ ಮುಖ್ಯ ಗುರಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ. ಪರೀಕ್ಷೆಯ ಅಂತಿಮ ಫಲಿತಾಂಶ ಸರ್ವಸ್ವ ಅಲ್ಲ. ಪರೀಕ್ಷೆಯಲ್ಲಿ ಗಳಿಸುವ ಪ್ರಥಮ ಶ್ರೇಣಿ ಮುಖ್ಯವೋ ಮುಂದೆ ವಿದ್ಯಾರ್ಥಿ ನಡೆಸುವ ಅರ್ಥಪೂರ್ಣ ಬದುಕು ಮುಖ್ಯವೋ? ಇದು ನಾವು ವಿವೇಚಿಸಬೇಕಾದ ವಿಚಾರ. ಪರೀಕ್ಷೆಯಲ್ಲಿ ಅತ್ಯುತ್ಕೃಷ್ಟ ಸ್ಥಾನ ಗಳಿಸಿ ಸಾಹಿತ್ಯ, ವಿಜ್ಞಾನ, ಕಲೆ, ಕ್ರೀಡೆ ಇಂತಹ ಕ್ಷೇತ್ರಗಳಲ್ಲಿ ಸಮಾಜಕ್ಕೆ ಹಿರಿದಾದ ಸೇವೆ ಮಾಡಿದವರ, ಕೊಡುಗೆ ನೀಡಿದವರ ಸಂಖ್ಯೆ ವಿರಳ. ಶಾಲಾ ದಿನಗಳಲ್ಲಿ ತೀರ ಸಾಧಾರಣ ಪ್ರತಿಭೆ ತೋರಿದ ವಿದ್ಯಾರ್ಥಿಗಳು ಸಮಾಜ ಸೇವೆ, ಸಂಶೋಧನೆ, ಕೃತಿ ರಚನೆ ಮತ್ತಿತರ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಹಲವು ದೃಷ್ಟಾಂತಗಳು ಸಿಗುತ್ತವೆ. ಆದ್ದರಿಂದ ಪರೀಕ್ಷೆಯ ಫಲಿತಾಂಶವನ್ನೇ ಹಾಡಿ ಹೊಗಳುವುದರಿಂದ ಮುಖ್ಯ ಅಲ್ಲದ ಮೌಲ್ಯವನ್ನು ನಾವು ಎಲ್ಲರೆದುರು ಎತ್ತಿ ಹಿಡಿದಂತಾಗುತ್ತದೆ.

ಹಾಗಾದರೆ ಶಿಕ್ಷಣ ಕ್ಷೇತ್ರಕ್ಕೆ ಅಂಟಿರುವ ಈ ಜಾಡ್ಯ ಮತ್ತು ಪಿಡುಗಿಗೆ ಪರಿಹಾರ ಏನು? ಸರಕಾರಗಳು ಬದಲಾದರೂ ಹಲವು ಆಯೋಗಗಳ ವರದಿ ಬಂದರೂ ಶಿಕ್ಷಣದ ಮೂಲಭೂತ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಇದು ಆತಂಕಕಾರಿ ಬೆಳವಣಿಗೆ. ಅಪಾಯದ ಸಂಕೇತ. ಹೀಗೆಯೇ ಮುಂದುವರಿದರೆ ಇದು ನಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಬಲಿ ತೆಗೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ನಮ್ಮ ಮಕ್ಕಳ ಪೂರ್ಣ ಭವಿಷ್ಯ ಮಕ್ಕಳ ಪರೀಕ್ಷಾ ಫಲಿತಾಂಶದ ಮೇಲೆ ಅವಲಂಬಿತವಾಗಿಲ್ಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಮುಖ್ಯವಾಗಿ ಸರಕಾರದ ಹೊಣೆ ಬಹಳ ದೊಡ್ಡದು. ಹುಟ್ಟುತ್ತಲೇ ಯಾರೂ ದಡ್ಡರಲ್ಲ. ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸೂಕ್ತ ಶೈಕ್ಷಣಿಕ ವಾತಾವರಣ ಮಾತ್ರ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಬಲ್ಲುದು. ಇದರ ಅರಿವು ಎಲ್ಲರಲ್ಲೂ ಒಡಮೂಡಲಿ.

ಶಿಕ್ಷಣ ಒಂದು ಸಂಕಲ್ಪ ಮತ್ತು ತಪಸ್ಸು. ತಾಯ್ನುಡಿಯನ್ನು ಕಲಿಯುತ್ತ, ಅದಕ್ಕೆ ವಿಶೇಷ ಮನ್ನಣೆ ನೀಡುತ್ತ ತನ್ನ ನೆಲದಲ್ಲಿ ತಾನು ಅನ್ಯನಾಗದೆ, ಇಲ್ಲಿ ಗೌರವದಿಂದ ಬಾಳುವ ಅವಕಾಶದಿಂದ ವಂಚಿತನಾಗದೆ ಕನ್ನಡಿಗ ಬದುಕು ಕಟ್ಟಿಕೊಳ್ಳಲಿ. ಸ್ವಾತಂತ್ರ‍್ಯೋತ್ಸವ ಸ್ಮರಣೆಯ ಈ ಪರ್ವ ಕಾಲದಲ್ಲಾದರೂ ಮುಂದಿನ ಭಯಾನಕ ದಿನಗಳನ್ನು ಎಣಿಸಿ ಅತಿ ಶೀಘ್ರವಾಗಿ ನಾವು ಎಚ್ಚರಗೊಳ್ಳುವುದರಲ್ಲೇ ವಿವೇಕವಿದೆ.

- ಸುಬ್ರಾಯ ಸಂಪಾಜೆ, ಮಡಿಕೇರಿ.