ಸಿದ್ದಾಪುರ, ಆ. ೧೬: ಮಾಲ್ದಾರೆ ವ್ಯಾಪ್ತಿಯ ಅವರೆಗುಂದ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಉರಗ ರಕ್ಷಕ ಸುರೇಶ್ ಪೂಜಾರಿ ಹಾಗೂ ಆರ್ಆರ್ಟಿ ಸಿಬ್ಬಂದಿ ಶಶಿ ಯಶಸ್ವಿಯಾಗಿದ್ದಾರೆ. ಗ್ರಾಮದ ಸಮುದಾಯ ಭವನ ಪಕ್ಕದ ಅಂಗನವಾಡಿ ಕೇಂದ್ರದ ಬಳಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವನ್ನು ಪ್ರತಕ್ಷವಾಗಿ ಕಂಡ ಗ್ರಾಮಸ್ಥ ಸಂಪತ್ ಕುಮಾರ್ ತಕ್ಷಣವೇ ಪಂಚಾಯಿತಿ ಸದಸ್ಯ ಮಹೇಶ್ ಕುಮಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಮಹೇಶ್, ಮಾಲ್ದಾರೆ ವಲಯ ಅರಣ್ಯಾಧಿಕಾರಿ ಹಂಸ ಅವರಿಗೆ ಮಾಹಿತಿ ನೀಡಿ ಸೆರೆಹಿಡಿಯಲು ಮನವಿ ಮಾಡಿದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಆರ್ಆರ್ಟಿ ಸಿಬ್ಬಂದಿ ಶಶಿ ಮತ್ತು ಉರಗ ರಕ್ಷಕ ಸುರೇಶ್ ಪೂಜಾರಿ ಸುಮಾರು ೧೨ ಅಡಿ ಉದ್ದವಿರುವ ೪೨ ಕೆಜಿ ತೂಕದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಬೆಟ್ಟದ ಬಳಿ ಬಿಟ್ಟಿದ್ದಾರೆ. ಅಂಗನವಾಡಿ ಕೇಂದ್ರ ಬಳಿ ಕಾಣಿಸಿಕೊಂಡ ಹೆಬ್ಬಾವನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು. -ಎಸ್.ಎಂ. ಮುಬಾರಕ್