ಚೆಯ್ಯಂಡಾಣೆ, ಆ. ೧೬: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಘಟನೆ ವೀರಾಜಪೇಟೆ ಮುಖ್ಯ ರಸ್ತೆಯ ಚಿಕ್ಕಪೇಟೆ ಬಳಿ ನೆನ್ನೆ ನಡೆದಿದೆ. ಮೂರ್ನಾಡು ಬೇತ್ರಿ ಮಾರ್ಗವಾಗಿ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಮಾರುತಿ ಜೆನ್ ಕಾರು ಚಿಕ್ಕಪೇಟೆ ಪೆಟ್ರೋಲ್ ಬಂಕ್ ಬಳಿಯ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ೨೦ ಅಡಿ ಆಳದ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದಿದೆ. ಅಪಘಾತದಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ಕಡೆಯಿಂದ ಇದೇ ಮಾರ್ಗವಾಗಿ ವೀರಾಜಪೇಟೆಗೆ ತೆರಳುತ್ತಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅಪಘಾತ ನಡೆದ ಸ್ಥಳದಲ್ಲಿ ಜನರನ್ನು ಕಂಡು ತಮ್ಮ ವಾಹನವನ್ನು ನಿಲ್ಲಿಸಿ ಅಪಘಾತದ ಸ್ಥಳವನ್ನು ಪರೀಕ್ಷಿಸಿ ಕಾರು ಚಾಲಕನ ಆರೋಗ್ಯದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.