ಸೋಮವಾರಪೇಟೆ, ಆ. ೧೬: ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲಿಸಿಕೊಂಡು ಗೌರಿ ಗಣೇಶೋತ್ಸವ ಹಬ್ಬಾಚರಣೆ ಮಾಡಬೇಕೆಂದು ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ ಸೂಚನೆ ನೀಡಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ನಡೆದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬವಾಗಿರುವ ಶ್ರೀ ಗೌರಿ ಗಣೇಶ ಚತುರ್ಥಿಯನ್ನು ಎಲ್ಲರೂ ಶ್ರದ್ಧಾ ಭಕ್ತಿಯಿಂದ ಆಚರಿಸುವಂತಾಗಬೇಕು. ನಾವು ಆಚರಿಸುವ ಹಬ್ಬಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಆಯೋಜಕರು ಶ್ರಮಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತೆ ಮತ್ತು ಎಚ್ಚರಿಕೆಯಿಂದ ಆಚರಿಸಬೇಕು ಎಂದರು.
ಪ್ರತಿಷ್ಠಾಪನೆ ಮತ್ತು ಕಾರ್ಯಕ್ರಮ ಆಯೋಜನೆ ಹಾಗೂ ಮೂರ್ತಿಗಳ ವಿಸರ್ಜನೆ ಸಂದರ್ಭ ಸಮಿತಿಯವರೇ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಪೆಂಡಾಲ್ ನಿರ್ಮಾಣ, ಅಗತ್ಯ ವಿದ್ಯುತ್ ಸಂಪರ್ಕ, ಬ್ಯಾನರ್ ಕಟ್ಟುವುದು, ಬಂಟಿAಗ್ ಅಳವಡಿಸಲು ಸ್ಥಳೀಯ ಆಡಳಿತದಿಂದ ಮೊದಲೇ ಅನುಮತಿ ಪಡೆದಿರಬೇಕು. ಉತ್ಸವ ಮೂರ್ತಿಗಳ ರಕ್ಷಣೆ ಪ್ರತಿಷ್ಠಾಪನಾ ಸಮಿತಿಯದ್ದಾಗಿರುತ್ತದೆ ಎಂದರು. ವಿಸರ್ಜನೋತ್ಸವ ಸಂದರ್ಭ ಮೂರ್ತಿಗಳ ಮೆರವಣಿಗೆ ವೇಳೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಎಲ್ಲ ಮಾಹಿತಿಯನ್ನು ಮೊದಲೇ ಪೊಲೀಸ್ ಠಾಣೆಗೆ ನೀಡಬೇಕು. ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರ ಡಿ.ಜೆ. ಬಳಸುವುದನ್ನು ನಿಷೇಧಿಸಿರುವುದರಿಂದ ಯಾರೂ ಮೆರವಣಿಗೆ ಸಂದರ್ಭ ಡಿ.ಜೆ. ಬಳಸಬಾರದು ಮತ್ತು ಶಬ್ಧ ಮಾಲಿನ್ಯ ತಡೆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ಸಭೆಯಲ್ಲಿ ಎಸ್.ಐ. ರವಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶ್ರೀ ಗೌರಿ ಗಣೇಶ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.