ಕುಶಾಲನಗರ, ಆ. ೧೭: ಗೌರಿ ಗಣೇಶ ಹಬ್ಬ ಆಚರಣೆ ಸಂದರ್ಭ ಗಣೇಶ ಪ್ರತಿಷ್ಠಾಪÀನಾ ಸಮಿತಿಗಳು ಕಟ್ಟುನಿಟ್ಟಾಗಿ ಕಾನೂನು ನಿಯಮಗಳನ್ನು ಪಾಲಿಸಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಪಿ. ಚಂದ್ರಶೇಖರ್ ಹೇಳಿದರು.

ಕುಶಾಲನಗರ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆದ ಕುಶಾಲನಗರ ತಾಲೂಕು ವ್ಯಾಪ್ತಿಯ ಗಣಪತಿ ಪ್ರತಿಷ್ಠಾಪÀನಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬದ ಆಚರಣೆಯಲ್ಲಿ ಸಮಿತಿಯವರು ಅನುಸರಿಸಬೇಕಾದ ಕ್ರಮಗಳು ಅನುಸರಿಸಬಾರದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಮತ್ತು ಇತರ ಸಂದರ್ಭ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಸಲಹೆ - ಸೂಚನೆ ನೀಡಿದರು.

ಗೌರಿ ಗಣೇಶ ಹಬ್ಬದ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೊದಲು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧ್ವನಿವರ್ಧಕ ಮೆರವಣಿಗೆ ಕಾರ್ಯಕ್ರಮಗಳಿಗೆ ಕೂಡ ಪೊಲೀಸ್ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.

ರಸ್ತೆ ಫುಟ್‌ಪಾತ್‌ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ಇರುವುದಿಲ್ಲ. ಗೌರಿ ಗಣೇಶ ಮೂರ್ತಿಗಳ ಸುರಕ್ಷತೆ ಸಮಿತಿಯವರ ಜವಾಬ್ದಾರಿಯಾಗಿದ್ದು, ಯಾವುದೇ ಅವಘಡ ಸಂಭವಿಸಿದರೂ ಸಮಿತಿಯವರನ್ನೇ ನೇರವಾಗಿ ಹೊಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಸುಪ್ರೀಂಕೋರ್ಟ್ ಆದೇಶದಂತೆ ನಿಷೇಧಕ್ಕೆ ಒಳಪಟ್ಟಿರುವ ಡಿ.ಜೆ. ಸೌಂಡ್ ಸಿಸ್ಟಂನ್ನು ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ ಬಳಸದಂತೆ ಅವರು ಸೂಚನೆ ನೀಡಿದರು.

ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಕುಶಾಲನಗರ ಮತ್ತು ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೧೬೦ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ ಎಂದರು. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಸಲಹೆ ನೀಡಿದರು. ಇಲಾಖೆ ಮೂಲಕ ನಿಯಮಾನುಸಾರ ಸಹಕಾರ ಒದಗಿಸುವ ಭರವಸೆಯನ್ನು ವ್ಯಕ್ತಪಡಿಸಿದರು.

ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿ ಗಣೇಶ್, ಗ್ರಾಮಾಂತರ ಪೊಲೀಸ್ ಠಾಣೆಯ ರಾಮಚಂದ್ರ, ಅಪರಾಧ ವಿಭಾಗದ ಸ್ವಾಮಿ, ಸುಂಟಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಮತ್ತು ತಾಲೂಕಿನ ೧೫೦ಕ್ಕೂ ಅಧಿಕ ಸಮಿತಿಯ ಪದಾಧಿಕಾರಿಗಳು ಇದ್ದರು.