ಸುಂಟಿಕೊಪ್ಪ, ಆ. ೧೭: ಕೆನರಾ ಬ್ಯಾಂಕಿನ ವತಿಯಿಂದ ಪ್ರತಿಭಾನ್ವಿತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆರು ವಿದ್ಯಾರ್ಥಿಗಳಿಗೆ ಶುಕ್ರವಾರ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷ ಶರೀಫ್ ಮತ್ತು ಸದಸ್ಯರು ಮುತುವರ್ಜಿ ವಹಿಸಿ ಬ್ಯಾಂಕಿನ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಬ್ಯಾಂಕಿನ ವ್ಯವಸ್ಥಾಪಕರಾದ ಅನಿಕೇತ್ ಅವರುಗಳು ಶಾಲೆಗೆ ತೆರಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಹಂಸಿಕ, ಕೆ. ದೀಕ್ಷಿತ, ಎಸ್. ದೀಕ್ಷಿತ ಹಾಗೂ ಪ್ರೌಢಶಾಲೆಯ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಿಶ್ಮಿತಾ, ಅಂಜಲಿ, ಸಂಜನಾ ಅವರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆರ್.ಹೆಚ್. ಶರೀಫ್ ಅವರು, ವಿದ್ಯಾರ್ಥಿಗಳಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ಕೊಡಲಿ ಎನ್ನುವ ದೃಷ್ಟಿಯಲ್ಲಿ ಹಾಗೂ ಈ ಮಕ್ಕಳಿಂದ ಮುಂದಿನ ದಿನಗಳಲ್ಲಿ ಉಳಿದ ಮಕ್ಕಳಿಗೆ ಸ್ಪೂರ್ತಿಯಾಗಲಿ ಎನ್ನುವ ದೃಷ್ಡಿಯಿಂದ ಬ್ಯಾಂಕಿನ ವ್ಯವಸ್ಥಾಪಕರನ್ನು ಮನವಿ ಮಾಡಿಕೊಂಡಾಗ ಅದಕ್ಕೆ ಸಮ್ಮತಿ ಸೂಚಿಸಿ ನಮ್ಮ ಶಾಲೆಯ ಮಕ್ಕಳಿಗೆ ನೀಡುವ ಭರವಸೆ ನೀಡಿದ್ದರು. ಅದರಂತೆ ಮೂವರು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬೇರೆ ಸಲವತ್ತುಗಳಿಗೆ ಪ್ರಯತ್ನಿಸಲಾಗುವುದು ಎಂದರು. ಸಂದರ್ಭ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಎಂ.ಆರ್. ಅನಿಕೇತ್, ಸಿಬ್ಬಂದಿ ಮರಿಯಮ್ಮ, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ, ಹಿರಿಯ ಶಿಕ್ಷಕ ಪ್ರಕಾಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಸಹಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.