ಶನಿವಾರಸಂತೆ, ಆ. ೧೭: ಜಿಲ್ಲಾ ಪೊಲೀಸ್ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆ ವತಿಯಿಂದ ಗೌರಿ-ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಾಂತಿ ಸಭೆಯನ್ನು ಸ್ಥಳೀಯ ಆರ್.ವಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಪಿ. ಚಂದ್ರಶೇಖರ್ ಮಾತನಾಡಿ, ಗೌರಿ-ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಯನ್ನು ಸಾರ್ವಜನಿಕ ಶಾಂತಿಗೆ ಭಂಗ ಬಾರದ ರೀತಿ ಕಾನೂನು ಪಾಲಿಸಿ ಆಚರಿಸಬೇಕು.ಗೌರಿ-ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯನ್ನು ೨-೩ ದಿನಗಳ ಮೊದಲೇ ತಿಳಿಸಬೇಕು. ಸರ್ಕಾರದ ಆದೇಶದಂತೆ ಡಿ.ಜೆ.ಯನ್ನು ರದ್ದು ಮಾಡಲಾಗಿದೆ. ಹಗಲು ವೇಳೆಯಲ್ಲೇ ದಿನದ ಬೆಳಕಿನಲ್ಲೇ ವಿಸರ್ಜನೆ ಮಾಡಬೇಕು. ಸಿಸಿ ಟಿವಿ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಶನಿವಾರಸಂತೆ ಪೊಲೀಸ್ ನಿರೀಕ್ಷಕ ಕೃಷ್ಣ ರಾಜ್ ಮಾತನಾಡಿ, ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ನಿಯಮಗಳನ್ನು ಅನುಸರಿಸಬೇಕು. ಮದ್ಯಪಾನ ಮಾಡುವವರ ಬಗ್ಗೆ ಗಮನಹರಿಸಬೇಕು. ಅಧಿಕ ಮಳೆಯಿಂದಾಗಿ ಹೊಳೆಗಳು ತುಂಬಿ ಹರಿಯುತ್ತಿದ್ದು, ಮುಂಜಾಗ್ರತೆ ಅವಶ್ಯ. ರಾತ್ರಿ ವಿಸರ್ಜನೆ ಮಾಡುವಾಗ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಈದ್ ಮಿಲಾದ್ ಹಬ್ಬದಲ್ಲೂ ಮೆರವಣಿಗೆ ಸಂದರ್ಭ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಪAಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಗೌರಿ-ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಬಗ್ಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು.ಹಬ್ಬಗಳನ್ನು ವಿಜೃಂಭಣೆಯಿAದ ಆಚರಿಸುವಾಗ ಸಮಾಜದ ಯಾರಿಗೂ ತೊಂದರೆಯಾಗಬಾರದು.ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಬಾರದು ಎಂದರು.
ವೇದಿಕೆಯಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ಪಿಎಸ್ಐ ಎಚ್.ವೈ. ಚಂದ್ರ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ, ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮ ಪ್ರಮುಖರು ಹಾಜರಿದ್ದರು.