ಸೋಮವಾರಪೇಟೆ, ಆ. ೧೯: ತಾಲೂಕಿನ ಶನಿವಾರಸಂತೆಯ ಐ.ಬಿ. ರಸ್ತೆಯಲ್ಲಿ ಸ್ಥಳೀಯರ ಆಕ್ಷೇಪಣೆಗಳ ನಡುವೆಯೂ ನೂತನವಾಗಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಅನುಮತಿ ನೀಡಿದ್ದು, ಈ ಬಗ್ಗೆ ಸಲ್ಲಿಕೆಯಾದ ದೂರಿಗೆ ಸಂಬAಧಿಸಿದAತೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದೆ.
ಶನಿವಾರಸಂತೆಯ ಐ.ಬಿ. ರಸ್ತೆಯಲ್ಲಿ ಸ್ಥಳೀಯರ ವಿರೋಧದ ನಡುವೆಯೂ ನೂತನವಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲಾಗಿದೆ. ಇದು ಜನವಸತಿ ಪ್ರದೇಶವಾಗಿದ್ದು, ಸುತ್ತಮುತ್ತಲಲ್ಲಿ ಅನೇಕ ಶಾಲಾ ಕಾಲೇಜುಗಳು ಇವೆ. ಮಹಿಳೆಯರು-ಮಕ್ಕಳು ಓಡಾಡುತ್ತಿರುತ್ತಾರೆ. ಆರಂಭದಲ್ಲಿಯೇ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರೂ ಯಾರೂ ಸಹ ಗಣನೆಗೆ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿಯಾದ ಲತೇಶ್ಕುಮಾರ್ ಎಂಬವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ಇದರೊಂದಿಗೆ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡದಂತೆ ಸ್ಥಳೀಯ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಿದ್ದರೂ ಸಹ ಪೂರಕ ಸ್ಪಂದನೆ ನೀಡಿಲ್ಲ. ಗ್ರಾ.ಪಂ. ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪರವಾನಗಿ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಸದರಿ ದೂರನ್ನು ಪರಿಶೀಲಿಸಿದ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಶ್ಯಾಮ ಭಟ್ ಹಾಗೂ ವಿಲೇಖನಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ದೂರಿನ ಪ್ರತಿಯನ್ನು ಸಲ್ಲಿಸಿ, ಈ ಬಗ್ಗೆ ವಿಚಾರಣೆ ನಡೆಸಿ ತಾ. ೧೦.೧೦.೨೦೨೫ರೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.