ಸುಂಟಿಕೊಪ್ಪ, ಆ. ೧೯: ದಾರಿ ತಪ್ಪಿ ಬಂದು ಮನೆಯ ಗೇಟಿನಲ್ಲಿ ಸಿಲುಕಿಕೊಂಡಿದ್ದ ಕಾಡುಕುರಿ ಮರಿಯನ್ನು ರಕ್ಷಿಸಿರುವ ಘಟನೆ ಸುಂಟಿಕೊಪ್ಪ ಶ್ರೀ ರಾಮ ಬಡಾವಣೆಯಲ್ಲಿ ನಡೆದಿದೆ.

ಕಳೆದ ರಾತ್ರಿ ಪಕ್ಕದ ತೋಟದಿಂದ ದಾರಿ ತಪ್ಪಿದ ಕಾಡುಕುರಿ ಮರಿಯೊಂದು ದಿ. ಎನ್.ಎಸ್. ಅಶೋಕ್ ಅವರ ಮನೆ ಮುಂಭಾಗದಲ್ಲಿರುವ ಕಬ್ಬಿಣದ ಗೇಟಿನ ಸರಳಿನ ನಡುವೆ ಸಿಲುಕಿ ಹೊರಬರಲಾಗದೇ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತಿತ್ತು. ರಾತ್ರಿ ಸುರಿದ ಭಾರೀ ಮಳೆ ಗಾಳಿಯ ಆರ್ಭಟದಲ್ಲಿ ಅಕ್ಕಪಕ್ಕದವರಿಗೆ ಕಾಡುಕುರಿಯ ರೋದÀನೆ ಕೇಳಿಸಿರಲಿಲ್ಲ.

ಇಂದು ಬೆಳಿಗ್ಗೆ ಸ್ಥಳೀಯರ ಕಣ್ಣಿಗೆ ಗೋಚರಿಸಿದ ಮೇರೆಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್, ಪತ್ರಕರ್ತ ಕೆ.ಎಸ್. ಅನಿಲ್ ಕುಮಾರ್ ಅವರು ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕುರಿ ಮರಿಯನ್ನು ಹೊರಕ್ಕೆ ತೆಗೆದು, ಪಶು ಚಿಕಿತ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸ್ ಸಿಬ್ಬಂದಿ ಪುನೀತ್ ಹಾಗೂ ಅರಣ್ಯ ಇಲಾಖೆಯ ಸಂಪತ್ ಅವರ ಸಮ್ಮುಖದಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಿದರು.