ವರದಿ : ಈಶಾನ್ವಿ

ವೀರಾಜಪೇಟೆ, ಆ. ೧೯: ಭಾದ್ರಪದ ಶುಕ್ಲ ಚೌತಿಯಂದು ಬರುವ ಗೌರಿ-ಗಣೇಶನನ್ನು ಸ್ವಾಗತಿಸಲು ವೀರಾಜಪೇಟೆ ಸಜ್ಜಾಗುತ್ತಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿ ದಸರಾಕ್ಕೆ ಪ್ರಖ್ಯಾತಿಯಾದರೆ, ವೀರಾಜಪೇಟೆ ಗೌರಿ ಗಣೇಶೋತ್ಸವಕ್ಕೆ ಹೆಸರುವಾಸಿಯಾಗಿದ್ದು, ಸುಮಾರು ೨೦೦ಕ್ಕೂ ಅಧಿಕ ವರ್ಷಗಳಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಅಪ್ಪಟ ಸಂಪ್ರದಾಯಕ್ಕೆ ಒತ್ತು ನೀಡಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಆಗಸ್ಟ್ ೨೬ ರಂದು ಗೌರಿ, ೨೭ ರಂದು ಗಣೇಶ ಚತುರ್ಥಿ ಹಬ್ಬ ನಿಗದಿಯಾಗಿದ್ದು ಸೆ. ೬ ರಂದು ವಿಸರ್ಜನಾ ಮಹೋತ್ಸವ ನಡೆಯಲಿದೆ.

ಅನಂತಪದ್ಮನಾಭ ವ್ರತದಂದು ಸಾಮೂಹಿಕವಾಗಿ ವಿದ್ಯುತ್ ಅಲಂಕೃತ ಮಂಟಪಗಳ ಶೋಭಾಯತ್ರೆಯೊಂದಿಗೆ ವಿಸರ್ಜನೋತ್ಸವ ನೆರವೇರಲಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾಡಿನೆಲ್ಲೆಡೆಯಿಂದ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ.

ನಗರದ ರಾಜ ಬೀದಿ ಎಂದು ಖ್ಯಾತಿ ಪಡೆದ ಮುಖ್ಯ ಬೀದಿಯ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಗೌರಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಗರದ ಎಲ್ಲೆಡೆ ಸಂಚರಿಸಿ ಭಕ್ತರಿಂದ ಪೂಜೆಗಳನ್ನು ಸ್ವೀಕರಿಸಿ ದೇವಾಲಯಕ್ಕೆ ಆಗಮನವಾಗಿ ಉತ್ಸವ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುತ್ತದೆ.

ಚತುರ್ಥಿಯಂದು ನಗರಕ್ಕೆ ಕಳಸಪ್ರಾಯದಂತಿರುವ ಶ್ರೀಮಹಾಗಣಪತಿ ದೇವಾಲಯದಲ್ಲಿ ಲಂಭೋದರನ ಉತ್ಸವ ಮೂರ್ತಿಯು ಪ್ರತಿಪ್ಠಾಪನೆಗೊಂಡ ಬಳಿಕ ಸಿಡಿ ಮದ್ದು ಸಿಡಿಸಲಾಗುತ್ತದೆ. ನಂತರ ಇತರ ಸ್ಥಳಗಳಲ್ಲಿ ಗಜಾನನ ಉತ್ಸವ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುವುದು ವಾಡಿಕೆಯಾಗಿದೆ.

ಇತಿಹಾಸ

ಕಳೆದ ೧೯೬೦ ರಲ್ಲಿ ಕೇವಲ ಎರಡು ಉತ್ಸವ ಸಮಿತಿಗಳು ಮಾತ್ರ ಗೌರಿಗಣೇಶನ ಉತ್ಸವವನ್ನು ಹತ್ತು ದಿನಗಳ ಕಾಲ ಆಚರಿಸಿ ಅದರಂತೆ ಅನಂತ ಪದ್ಮನಾಭ ವ್ರತದ ದಿನದಂದು ಸಾಮೂಹಿಕ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸುತ್ತಿದ್ದವು. ೧೯೬೪-೬೫ ರಿಂದ ಉತ್ಸವಕ್ಕೆ ಇನ್ನೆರಡು ಸಮಿತಿಗಳು ಸೇರಿದಂತೆ ೨೦೦೦ದ ವೇಳೆಗೆ ಸುಮಾರು ೧೩ ಉತ್ಸವ ಸಮಿತಿಗಳು ೨೦೧೬ರ ಹೊತ್ತಿಗೆ ೧೮ ನಂತರ ೨೦೨೨ ರ ವೇಳೆಗೆ ೨೨ ಉತ್ಸವ ಸಮಿತಿಗಳು ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ಪೂಜಿಸಿ ಬಳಿಕ ಸಾಮೂಹಿಕ ಮೆರವಣಿಗೆ ನಡೆಸಿ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಪವಿತ್ರವಾದ ಗೌರಿಕೆರೆಯಲ್ಲಿ ಶಾಸ್ತೊçÃಕ್ತವಾಗಿ ಎಲ್ಲಾ ಉತ್ಸವ ಮೂರ್ತಿಗಳನ್ನು ವಿಸರ್ಜಿಸುತ್ತಿವೆ.

ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯು ೩೫ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ದಿನಂಪ್ರತಿ ವೇದಿಕೆ ಕಾರ್ಯಕ್ರಮಗಳು ಹಾಗೂ ಕೊನೆಯ ದಿನದಂದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಪಂಜರ್‌ಪೇಟೆಯ ಶ್ರೀ ವಿನಾಯಕ ಸೇವಾ ಸಮಿತಿ ತನ್ನ ೩೧ನೇ ವರ್ಷ ಪೂರೈಸುತ್ತಿದ್ದು ಹಲವಾರು ಕಾರ್ಯಕ್ರಮಗಳು ನಡೆಯಲಿವೆ.

ಪಂಜರ್‌ಪೇಟೆ ಗಣಪತಿ ಬೀದಿಯ ಶ್ರೀ ಮಹಾ ಗಣಪತಿ ಸೇವಾ ಸಂಘ ೩೩ನೇ ವರ್ಷದ ಆಚರಣೆಗೆ ಸಜ್ಜಾಗುತ್ತಿದೆ.

ಅಪ್ಪಯ್ಯಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿ ೯ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ.

ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಿ-ಗಣೇಶೋತ್ಸವ ಪ್ರಯುಕ್ತ ನವ ದಿನಗಳಲ್ಲಿ ಸಂಸ್ಕೃತಿಗೆ ಅನುಗುಣವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಗಡಿಯಾರ ಕಂಬದ ವiಹಾ ಗಣಪತಿ ದೇವಾಲಯದಲ್ಲಿ ೧೮೫೫ರಲ್ಲಿ ತಮಿಳುನಾಡಿನ ಶ್ರೀ ರಾಮಸ್ವಾಮಿ ಪಿಳ್ಳೆಯವರಿಂದ ಗಣಪತಿ ಮೂರ್ತಿಯನ್ನು ಸಣ್ಣದಾದ ಗುಡಿಯಲ್ಲಿ ಪ್ರತಿಷ್ಟಾಪನೆ ಮಾಡಿ ಸುಮಾರು ೧೬೩ ವರ್ಷಗಳು ಸಂದಿದೆ. ಇಲ್ಲಿ ನಡೆಯುವ ಉತ್ಸವ ಆಧುನಿಕತೆಯ ಮೆರುಗು ಇಲ್ಲದೆ ಸಾಂಪ್ರದಾಯಿಕವಾಗಿ ನಡೆಯಲಿದೆ. ಕೊನೆಯ ದಿನ ಹೂವಿನ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ದು ವಿಸರ್ಜಿಸಲಾಗುತ್ತದೆ.

ಅರಸುನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ೪೫ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಇಲ್ಲಿ ವಿಭಿನ್ನವಾಗಿ ಗಣೇಶನಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ತೆಲುಗು ಶೆಟ್ಟರ ಬೀದಿ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ವಿನಾಯಕ ಭಕ್ತ ಮಂಡಳಿ ನಡೆಯುತ್ತಿರುವ ಉತ್ಸವವು ೪೦ ನೇ ವರ್ಷಕ್ಕೆ ಕಾಲಿರಿಸಿದೆ.

ನೆಹರು ನಗರದ ನೇತಾಜಿ ಗಣೇಶೋತ್ಸವ ಸಮಿತಿ ನೇತಾಜಿ ಯುವಕ ಸಂಘದಿAದ ಆಚರಿಸಲಾಗುವ ಉತ್ಸವವು ೩೪ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಯುವಕ ಸಂಘವು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಉತ್ಸವ ಆಚರಿಸುತ್ತದೆ.

ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ ೩೬ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಮಲೆತಿರಿಕೆ ಬೆಟ್ಟದ ಕಣ್ಮಣಿ ಯುವಕ ಸಂಘವು ೩೧ನೇ ವರ್ಷದ ಗಣೇಶೋತ್ಸವÀಕ್ಕೆ ಸಜ್ಜಾಗುತ್ತಿದೆ.

ಸುಂಕದಕಟ್ಟೆಯ ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿಯು ೨೬ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.

ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿ ೩೩ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಇಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.ಕೆ. ಬೋಯಿಕೇರಿ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ತನ್ನ ೩೭ನೇ ವರ್ಷದ ಉತ್ಸವ ಆಚರಣೆ ಮಾಡುತ್ತಿದೆ.

ಚಿಕ್ಕಪೇಟೆ ಜಲದರ್ಶಿನಿ ಗಣೇಶೋತ್ಸವ ಸಮಿತಿ ೨೮ನೇ ವರ್ಷಕ್ಕೆ ಕಾಲಿರಿಸಿದೆ. ಪೌರಸೇವಾ ನೌಕರರ ಸಂಘ ಪಟ್ಟಣ ಪಂಚಾಯಿತಿ ಗಣೇಶೋತ್ಸವ ಸಮಿತಿ ೨೧ನೇ ವರ್ಷದ ಉತ್ಸವವನ್ನು ಆಚರಿಸುತ್ತಿದೆ. ಮೀನುಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ೧೪ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಈ ಸಮಿತಿ ವತಿಯಿಂದ ಮೀನುಪೇಟೆ ಬೀದಿ ಅಲಂಕಾರ ಹಾಗೂ ಕೊನೆಯ ದಿನ ಅನ್ನಸಂತರ್ಪಣೆ ನಡೆಯಲಿದೆ. ಹರಿಕೆರೆ ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ೨೬ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಿದೆ. ಕುಕ್ಲೂರಿನ ಶ್ರೀ ವಿನಾಯಕ ಯುವಕರ ಸಮಿತಿ ೨೫ನೇ ವರ್ಷದ ಗಣೇಶೋತ್ಸವಕ್ಕೆ ಸಜ್ಜಾಗುತ್ತಿದೆ. ಗೌರಿಕೆರೆಯ ಶ್ರೀ ಗೌರಿಕೆರೆ ಸೇವಾ ಸಮಿತಿ ಹಲವಾರು ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸುತ್ತಿದೆ.

ಶಿವಕೇರಿ ಶ್ರೀ ವಿನಾಯಕ ಉತ್ಸವ ಸಮಿತಿ ಕಳೆದ ಮೂರು ವರ್ಷಗಳಿಂದ ಶೋಭಯಾತ್ರೆಯಲ್ಲಿ ಭಾಗವಹಿಸುತ್ತಿದೆ.

ನಗರದ ೨೨ ಸ್ಥಳಗಳಲ್ಲಿ ವಿದ್ಯುಕ್ತವಾಗಿ ಚತುರ್ಥಿಯಂದು ವಿಘ್ನ ವಿನಾಯಕನ ವಿವಿಧ ಭಂಗಿಗಳಲ್ಲಿರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಗರದ ಆಯ್ದ ಸಮಿತಿಗಳು ೯ ದಿನಗಳ ಕಾಲ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಅಲ್ಲದೇ ಕೆಲವು ಸಮಿತಿಯಿಂದ ಭಕ್ತರಿಗೆ ಪ್ರತಿದಿನ ಅನ್ನ ಸಂತರ್ಪಣೆ ನಡೆಯಲಿದೆ.

‘ಯಶಸ್ವಿ ಆಚರಣೆ ಆಗಲಿ’

ವೀರಾಜಪೇಟೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶೋತ್ಸವ ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಂಡಿದೆ. ಇಲ್ಲಿ ವಿನಾಯಕ ಚತುರ್ಥಿಯಂದು ವಿಘ್ನ ವಿನಾಯಕನ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿ ಅನಂತ ಪದ್ಮನಾಭ ವೃತದಂದು ಉತ್ಸವ ಮೂರ್ತಿಗಳನ್ನು ಶೋಭಾsಯಾತ್ರೆಯ ಮೂಲಕ ಇತಿಹಾಸ ಪ್ರಸಿದ್ದವಾದ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುತ್ತಿರುವುದು ತಲಾತಲಾಂತರ ವರ್ಷಗಳಿಂದ ನಡೆದು ಬಂದ ಪದ್ಧತಿ ಆಗಿದೆ. ಅದರಂತೆ ಈ ಬಾರಿಯೂ ನಡೆಸಲಾಗುತ್ತದೆ. ಸರಕಾರದ ಮಾರ್ಗಸೂಚಿಯನ್ವಯ ಹಬ್ಬ ಆಚರಿಸೋಣ. ನಾಡಹಬ್ಬಕ್ಕೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ವೀರಾಜಪೇಟೆಯಲ್ಲಿ ಎಲ್ಲರೂ ಸೇರಿ ಯಶಸ್ವಿಯಾಗಿ ಹಬ್ಬ ಆಚರಿಸುವಂತಾಗಲಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಸಾಂಪ್ರದಾಯಿಕ ಆಚರಣೆ

ವೀರಾಜಪೇಟೆ ನಗರ ವ್ಯಾಪ್ತಿಯಲ್ಲಿ ೨೨, ಗ್ರಾಮಾಂತರ ವ್ಯಾಪ್ತಿಯಲ್ಲಿ ಸುಮಾರು ೨೮ಕ್ಕೂ ಹೆಚ್ಚು, ಮನೆಗಳಲ್ಲಿ ಸೇರಿದಂತೆ ಸುಮಾರು ೧೦೦ಕ್ಕೂ ಅಧಿಕ ಕಡೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ವೀರಾಜಪೇಟೆಯಲ್ಲಿ ಆಚರಿಸಿಕೊಂಡು ಬರುತ್ತಿರುವ ಗೌರಿಗಣೇಶ ಹಬ್ಬವನ್ನು ವಿಜ್ರಂಭಣೆಯಿAದ ಸರಕಾರದ ಮಾರ್ಗಸೂಚಿ ಆದೇಶ ಷರತ್ತುಗಳನ್ನು ಪಾಲಿಸಿ ಸಾಂಪ್ರಾದಾಯಿಕವಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ವೀರಾಜಪೇಟೆಯ ಐತಿಹಾಸಿಕ ಗೌರಿಗಣೇಶ ನಾಡಹಬ್ಬ ಸಮಿತಿಯ ಕಾರ್ಯಾಧ್ಯಕ್ಷ ಶಭರೀಶ್ ಶೆಟ್ಟಿ ತಿಳಿಸಿದ್ದಾರೆ.

ಸಾಮಾಜಿಕ ಜವಾಬ್ದಾರಿ ಅರಿಯಬೇಕು

ಗೌರಿ ಗಣೇಶ ಉತ್ಸವ ಸಮಿತಿಯವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಹಬ್ಬ ಆಚರಿಸಬೇಕು. ನಿರ್ದಿಷ್ಟ ಶಬ್ದದ ಮಿತಿಯನ್ನು ಮೀರದಂತೆ ಸಂಘಟಕರು ಎಚ್ಚರ ವಹಿಸಬೇಕು. ಸಿಂಗಲ್ ವಿಂಡೋ ಸಿಸ್ಟಂ ಮಾಡಲಾಗಿದೆ. ಪ್ರತಿಷ್ಟಾಪನೆ ಮಾಡಲಾಗಿರುವ ಸ್ಥಳದಲ್ಲಿ ೨೪ ಗಂಟೆಗಳ ಸ್ವಯಂಸೇವಕರು ಯಾರಾದರು ಒಬ್ಬರು ಕಡ್ಡಾಯವಾಗಿ ಇರಲೇಬೇಕು ಎಂದು ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಪರಿಸರಕ್ಕೆ ಪೂರಕ ಆಚರಣೆ ಆಗಲಿ

ಪರಿಸರಕ್ಕೆ ಪೂರಕವಾದ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮಾಡಬೇಕು. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗದ ರೀತಿಯಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುವಂತಾಗಬೇಕು. ಸರಕಾರದ ಆದೇಶ ಪಾಲನೆ ಮಾಡಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಘುರಾಮ್ ತಿಳಿಸಿದ್ದಾರೆ.